ADVERTISEMENT

ಬಂದರು ಅಧಿಕಾರಿ ನಾಪತ್ತೆ; ಸಿಐಡಿ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 17:30 IST
Last Updated 17 ಫೆಬ್ರುವರಿ 2011, 17:30 IST
ಬಂದರು ಅಧಿಕಾರಿ ನಾಪತ್ತೆ; ಸಿಐಡಿ ಹುಡುಕಾಟ
ಬಂದರು ಅಧಿಕಾರಿ ನಾಪತ್ತೆ; ಸಿಐಡಿ ಹುಡುಕಾಟ   

ಕಾರವಾರ:ಇಲ್ಲಿಯ ಅಲಿಗದ್ದಾ ಹಾಗೂ ಬೈತಖೋಲ ಬಂದರಿನಲ್ಲಿ ದಾಸ್ತಾನು ಇದ್ದ ಅದಿರು ಕಳ್ಳತನ ಆಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಎದುರು ಫೆ.15ರೊಳಗೆ ಹಾಜರಾಗಬೇಕಿದ್ದ ಬಂದರು ಅಧಿಕಾರಿ ಕ್ಯಾಪ್ಟನ್ ಸಿ.ಸ್ವಾಮಿ ತಲೆಮರೆಸಿಕೊಂಡಿದ್ದು, ಸಿಐಡಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸಿದ್ದಾರೆ.

ಸಿಐಡಿ ಅಪರಾಧಗಳ ವಿಭಾಗದ ಪೊಲೀಸ್ ಉಪಾಧೀಕ್ಷಕ ಎನ್. ಮೋಹನ್‌ರಾವ್ ನೇತೃತ್ವದ ತಂಡ ಫೆ. 12ರಂದು ಕಾರವಾರಕ್ಕೆ ಆಗಮಿಸಿ ಬಂದರು ಅಧಿಕಾರಿ ಭೇಟಿ ಆಗದೇ ಇರುವ ಹಿನ್ನೆಲೆಯಲ್ಲಿ ಅವರ ಕಚೇರಿಗೆ ನೋಟಿಸ್ ಅಂಟಿಸಿ ಅದಿರು ಕಳ್ಳತನಕ್ಕೆ ಸಂಬಂಧಪಟ್ಟ ತನಿಖೆಗೆ ಸಹಕರಿಸಬೇಕು ಎಂದು ಕೋರಿತ್ತು.

ಅವಧಿ ಮುಗಿದು ಎರಡು ದಿನಗಳ ಕಳೆದರೂ ಕ್ಯಾ.ಸ್ವಾಮಿ ಸಿಐಡಿ ತಂಡದ ಎದುರು ಹಾಜರಾಗಲಿಲ್ಲ. ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಪ್ರಭಾರ ನಿರ್ದೇಶಕರಾಗಿದ್ದ ಅವರು ಸೇವೆಗೆ ಬಾರದೇ ಇರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಆರ್. ಮೋಹನ ಗುರುವಾರ ಸಂಜೆ ಹೆಚ್ಚುವರಿಯಾಗಿ ಬಂದರು ನಿರ್ದೇಶಕರ ಅಧಿಕಾರ ವಹಿಸಿಕೊಂಡಿದ್ದಾರೆ.

ಪಂಚನಾಮೆ: 1.15 ಲಕ್ಷ ಮೆಟ್ರಿಕ್ ಟನ್ ಅದಿರು ಕಳ್ಳತನದ ಬಗ್ಗೆ ಕಾರವಾರ ನಗರಠಾಣೆಯಲ್ಲಿ ಕಳೆದ ಜುಲೈ 26 ರಂದು ದಾಖಲಾದ ಮೊಕದ್ದಮೆ ಸಂಖ್ಯೆ 154/10 ಕಲಂ 409, 379ಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸ್ ಉಪಾಧೀಕ್ಷಕ ಎನ್. ಮೋಹನ್‌ರಾವ್ ನೇತೃತ್ವದ ತಂಡ ಕಾರವಾರ ಬಂದರು ಹಾಗೂ ಅಲಿಗದ್ದಾದಲ್ಲಿ ಸ್ಥಳ ಪಂಚನಾಮೆ ನಡೆಸಿತು.

ಗಣಿ ಮತ್ತು ಭೂ ವಿಜ್ಞಾನ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನೆರವು ಪಡೆದ ಸಿಐಡಿ ತಂಡದವರು ಬೈತಖೋಲ ಹಾಗೂ ಅಲಿಗದ್ದಾದಲ್ಲಿರುವ ಡ್ರೀಮ್ ಲಾಜಿಸ್ಟಿಕ್, ಜಿ.ಎಂ. ಬಕ್ಷಿ, ಫಾಲ್ಕನ್, ಆಳ್ವಾರಿಸ್ ಆ್ಯಂಡ್ ಥಾಮಸ್ ಹಾಗೂ ಪ್ರಿಂಟೆಕ್ಷ್ ಕಂಪೆನಿಗೆ ಸೇರಿದ ಒಟ್ಟು 17 ಅದಿರು ರಾಶಿಗಳ ಪಂಚನಾಮೆ ನಡೆಸಿತು. ಅದಿರು ರಾಶಿಯ ಸುತ್ತಳೆ, ಎತ್ತರ ಅಳೆದು ಎಷ್ಟು ಟನ್ ಅದಿರು ಇರಬಹುದು ಎಂದು ಅಂದಾಜು ಮಾಡಿದರು.

ಬೆಳಿಗ್ಗೆ 10ಗಂಟೆಯಿಂದ ಆರಂಭವಾದ ಅದಿರು ರಾಶಿ ಮಾಪನ ಕಾರ್ಯ ಸಂಜೆಯ ವರೆಗೂ ನಡೆಯಿತು. ಅರಣ್ಯ ಇಲಾಖೆ ಎಸಿಎಫ್ ಮೋಹನ್ ಕಣಗಿಲ್, ಸಿಐಡಿ ಉಪಾಧೀಕ್ಷಕ ಮುದ್ದುಮೋಹನ. ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯ ಅಧಿಕಾರಿ ದಾವೂದ್ ಸ್ಥಳದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.