ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ (ಈಗಿನ ಬಿಬಿಎಂಪಿ) ವ್ಯಾಪ್ತಿಯೊಳಗೇ ಕೋಟ್ಯಧಿಪತಿಗಳಿಗೆ, ರಾಜಕಾರಣಿಗಳಿಗೆ, ಸರ್ಕಾರಿ ನೌಕರರಿಗೆ, ಅವರ ಕುಟುಂಬಸ್ಥರಿಗೆ, ಒಂದೇ ಕುಟುಂಬದ ಹಲವರಿಗೆ ಅಕ್ರಮವಾಗಿ ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರು ಮಾಡಿರುವುದನ್ನು ಬೆಂಗಳೂರು ನಗರ ಜಿಲ್ಲಾಡಳಿತ ಪತ್ತೆ ಹಚ್ಚಿದೆ.
1997ರಿಂದ 2004ರ ಅವಧಿಯಲ್ಲಿ 79 ಮಂದಿಗೆ ಅಕ್ರಮವಾಗಿ 143 ಎಕರೆಯನ್ನು ಮಂಜೂರು ಮಾಡಲಾಗಿದ್ದು, ಅದನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯಬೇಕು ಎಂದು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ (ಎ.ಸಿ.) ನ್ಯಾಯಾಲಯ ಜುಲೈ 28ರಂದು ಆದೇಶಿಸಿದೆ. ಈ ಆದೇಶದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಬಿಎಂಪಿ (ಈಗಿನ ಬಿಬಿಎಂಪಿ) ಕೇಂದ್ರ ಕಚೇರಿಯಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಜಾಗ ಮಂಜೂರು ಮಾಡಲು ನಿಯಮದಲ್ಲಿ ಅವಕಾಶ ಇಲ್ಲ.
ನಿಯಮಗಳನ್ನು ಗಾಳಿಗೆ ತೂರಿ ಬಿಬಿಎಂಪಿ ಸಿರಿವಂತರಿಗೆ ಜಾಗ ಮಂಜೂರು ಮಾಡಲಾಗಿದೆ. ಉಳ್ಳವರಿಗೆ ಮಂಜೂರಾದ ಭೂಮಿಯ ಒಟ್ಟು ಮೌಲ್ಯ ₹1,500 ಕೋಟಿ ಎಂದು ಜಿಲ್ಲಾಡಳಿತ ಅಂದಾಜಿಸಿದೆ. ಆದೇಶ ಹೊರಡಿಸಿದ ಬೆನ್ನಲ್ಲೇ ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜು ಅವರ ವರ್ಗಾವಣೆಯಾಗಿದೆ. ಈ ವರ್ಗಾವಣೆಯಲ್ಲಿ ಭೂಮಾಫಿಯಾ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿದೆ.
‘ಬೆಂಗಳೂರು ದಕ್ಷಿಣದಲ್ಲಿ 800 ಎಕರೆಯನ್ನು ಬಗರ್‌ಹುಕುಂ ಯೋಜನೆಯಡಿ ಮಂಜೂರು ಮಾಡಲಾಗಿದ್ದು, 300 ಎಕರೆ ಮಾತ್ರ ಅರ್ಹ ಬಡವರಿಗೆ ಸಿಕ್ಕಿದೆ. ಉಳಿದ ಜಾಗ ಶ್ರೀಮಂತರ ಪಾಲಾಗಿದೆ. ಮೊದಲ ಹಂತದಲ್ಲಿ ಶ್ರೀಮಂತರ ಪಟ್ಟಿ ಮಾಡಲಾಗಿದೆ. ಎರಡನೇ ಹಂತದ ಸರ್ವೆ ಕಾರ್ಯವನ್ನು ಶೀಘ್ರವೇ ನಡೆಸಿ ಆದೇಶ ಹೊರಡಿಸುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಬಗರ್‌ಹುಕುಂ ಸಮಿತಿಗೆ ಸ್ಥಳೀಯ ಶಾಸಕರು ಅಧ್ಯಕ್ಷರು, ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿ. ಅರ್ಜಿಯ ದಾಖಲೆಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಜಾಗ ಮಂಜೂರು ಮಾಡುವ ಹೊಣೆ ಈ ಸಮಿತಿಯ ಮೇಲಿದೆ. ಶಾಸಕ ಆರ್.ಅಶೋಕ ಈ ಸಮಿತಿಯ ಅಧ್ಯಕ್ಷರಾಗಿದ್ದರು.
ಏನಿದು ಅಕ್ರಮ?: ಬೆಂಗಳೂರು ದಕ್ಷಿಣದಲ್ಲೂ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದ ಅನೇಕ ಫಲಾನುಭವಿಗಳು ಈ ಯೋಜನೆಯಡಿ ಜಾಗ ಸಕ್ರಮಕ್ಕೆ ಅರ್ಜಿ ಸಲ್ಲಿಸಿದ್ದರು. ‘ಈ ಭೂಮಿ ಬಿಬಿಎಂಪಿ ವ್ಯಾಪ್ತಿಯೊಳಗೆ ಇದೆ. ಹೀಗಾಗಿ ಮಂಜೂರು ಮಾಡಲು ಸಾಧ್ಯವಿಲ್ಲ’ ಎಂದು ಅಂದಿನ ಕಂದಾಯ ನಿರೀಕ್ಷಕರು ವರದಿ ಸಲ್ಲಿಸಿದ್ದರು.
ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಇದಕ್ಕೆ ವ್ಯತಿರಿಕ್ತ ವರದಿ ನೀಡಿದ್ದರು. ಬಿಬಿಎಂಪಿ ಕೇಂದ್ರ ಕಚೇರಿಯಿಂದ ಈ ಪ್ರದೇಶಗಳಿಗೆ ಇರುವ ರಸ್ತೆಗಳ ಉದ್ದವನ್ನು ಗಣನೆಗೆ ತೆಗೆದುಕೊಂಡು ಈ ಜಾಗಗಳೆಲ್ಲ ಬಿಬಿಎಂಪಿಯಿಂದ ಹೊರಗಿವೆ ಎಂದು ಉಲ್ಲೇಖಿಸಿದ್ದರು. ಇದನ್ನು ಪರಿಗಣನೆಗೆ ತೆಗೆದುಕೊಂಡು ಬಗರ್‌ಹುಕುಂ ಸಮಿತಿ ಜಾಗ ಮಂಜೂರು ಮಾಡಿತ್ತು.
‘ಮಂಜೂರಾದ ಜಾಗಗಳೆಲ್ಲ ಬಿಬಿಎಂಪಿ ವ್ಯಾಪ್ತಿಯೊಳಗೆ ಇವೆ ಎಂಬುದು ಕಂದಾಯ ನಿರೀಕ್ಷಕ, ಸರ್ವೆಯರ್ ಹಾಗೂ ಭೂಮಿ ಸಂರಕ್ಷಣೆ ಕಾರ್ಯಪಡೆ ನೀಡಿರುವ ವರದಿಗಳಿಂದ ಮತ್ತು ಗೂಗಲ್ ನಕಾಶೆಯಿಂದ ಸಾಬೀತಾಗಿದೆ. ಯಾವುದೇ ಅಂತರವನ್ನು ಅಳೆಯುವಾಗ ನೇರ ಅಂತರವನ್ನು (ಸಮತಲದ ಮೇಲಿನ ನೇರ ಗೆರೆ) ಪರಿಗಣಿಸಬೇಕು ಎಂದು ಮೈಸೂರು ಸಾಮಾನ್ಯ ನಿಯಮಾವಳಿ ಕಾಯ್ದೆಯಲ್ಲಿ (ಮೈಸೂರು ಜನರಲ್ ಕ್ಲಾಸಸ್ ಆ್ಯಕ್ಟ್) ಇದೆ. ತಹಶೀಲ್ದಾರ್ ಈ ಅಂಶವನ್ನೇ ಗಣನೆಗೆ ತೆಗೆದುಕೊಂಡು ಸರ್ವೆ ನಡೆಸಿದ್ದಾರೆ. ಎಂಜಿನಿಯರ್‌ಗಳು ರಸ್ತೆ ಮಾರ್ಗ ಪರಿಗಣಿಸಿದ್ದಾರೆ. ಸಮಿತಿ ಕಾನೂನು ಅಂಶಗಳನ್ನು ಮರೆಮಾಚಿ ಅಕ್ರಮವಾಗಿ ಜಾಗ ಮಂಜೂರು ಮಾಡಿದೆ’ ಎಂದು ಉಪವಿಭಾಗಾಧಿಕಾರಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
‘ಜತೆಗೆ ಶ್ರೀಮಂತರಿಗೆ, ಗ್ರಾಮದ ನಿವಾಸಿಗಳಲ್ಲದವರಿಗೆ, ಒಂದೇ ಕುಟುಂಬದ ಹಲವರಿಗೆ ಜಾಗ ಮಂಜೂರು ಮಾಡುವ ಮೂಲಕ ನಿಯಮಗಳನ್ನು ಗಾಳಿಗೆ ತೂರಿದೆ. ಈ ಜಾಗವನ್ನು ಇಲಾಖೆಯ ವಶಕ್ಕೆ ಪಡೆಯಲು ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅವರು ಕ್ರಮ ಕೈಗೊಳ್ಳಬೇಕು’ ಎಂದು ಅವರು ನಿರ್ದೇಶನ ನೀಡಿದ್ದಾರೆ.
‘ಆದೇಶ ಹೊರಡಿಸುವ ಮುನ್ನ 79 ಮಂದಿಗೂ ನೋಟಿಸ್ ನೀಡಲಾಗಿತ್ತು. 22 ಮಂದಿ ನೋಟಿಸ್‌ಗೆ ಉತ್ತರ ನೀಡಿ ಕಾನೂನುಬದ್ಧವಾಗಿ ಮಂಜೂರಾಗಿದೆ ಎಂದು ವಾದಿಸಿದ್ದರು. 12 ಮಂದಿ ಉತ್ತರವನ್ನೇ ನೀಡಿಲ್ಲ. ಉಳಿದ ನಿವಾಸಿಗಳು ಗ್ರಾಮಗಳಲ್ಲಿ ಇರಲಿಲ್ಲ. ಅವರಿಗೆ ಕೊಟ್ಟ ನೋಟಿಸ್ ವಾಪಸ್ ಬಂತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಒಟ್ಟು 158 ಎಕರೆ 7 ಗುಂಟೆಯನ್ನು ಗುರುತಿಸಲಾಗಿತ್ತು. ನೋಟಿಸ್ ಪಡೆದ ನಾಲ್ವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದರು. ಹೀಗಾಗಿ 15 ಎಕರೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಬೆಳಕಿಗೆ ಬಂದಿದ್ದು ಹೇಗೆ?: ಬಗರ್‌ಹುಕುಂ ಜಮೀನನ್ನು ಯಾವ ಮಾನದಂಡ ಅನುಸರಿಸಿ ಮಂಜೂರು ಮಾಡಲಾಗಿದೆ ಎಂದು ಪ್ರಶ್ನಿಸಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಬಾಲಸುಬ್ರಮಣಿಯನ್ ನೇತೃತ್ವದ ಸರ್ಕಾರಿ ಭೂಮಿ ಸಂರಕ್ಷಣೆ ಕಾರ್ಯಪಡೆ ಎಲ್ಲ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್‌ಗಳಿಗೆ ಪತ್ರ ಬರೆದಿತ್ತು.
ಈ ನಡುವೆ, ಆಗ ಶಾಸಕರಾಗಿದ್ದ ಎಂ. ಶ್ರೀನಿವಾಸ್ ಅವರು ಬಿ.ಎಂ. ಕಾವಲ್‌ನಲ್ಲಿ ಬೇನಾಮಿ ಹೆಸರಿನಲ್ಲಿ 18 ಎಕರೆ ಜಾಗ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಸಾರ್ವಜನಿಕರೊಬ್ಬರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಇದನ್ನು ವಶಕ್ಕೆ ಪಡೆಯಬೇಕು ಎಂದು ಜಿಲ್ಲಾಡಳಿತಕ್ಕೆ ನ್ಯಾಯಾಲಯ 2013ರಲ್ಲಿ ಸೂಚಿಸಿತ್ತು.
‘ಕಾವಲ್‌ನಲ್ಲಿ ಅಕ್ರಮವಾಗಿ ಇನ್ನಷ್ಟು ಜಾಗ ಮಂಜೂರು ಮಾಡಿರುವ ಅನುಮಾನ ಇದೆ. ಈ ಬಗ್ಗೆಯೂ ತನಿಖೆ ನಡೆಸಬೇಕು’ ಎಂದು ಜಿಲ್ಲಾಡಳಿತಕ್ಕೆ ತಾಕೀತು ಮಾಡಿತ್ತು.
ಆ ಬಳಿಕ ಹೈಕೋರ್ಟ್ ರಿಜಿಸ್ಟ್ರಾರ್ ಅವರು ಜಿಲ್ಲಾಡಳಿತಕ್ಕೆ ಪತ್ರ ಬರೆದು ತ್ವರಿತಗತಿಯಲ್ಲಿ ಸರ್ವೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದರು.
ಈ ಪ್ರಕರಣದ ಬೆನ್ನು ಹತ್ತಿದ್ದ ನಾಗರಾಜು ನೇತೃತ್ವದ ಅಧಿಕಾರಿಗಳ ತಂಡಕ್ಕೆ ಅಕ್ರಮದ ಒಂದೊಂದೇ ಒಳಸುಳಿ ಗೋಚರಿಸಲು ಆರಂಭಿಸಿತು. ಅಧಿಕಾರಿಗಳು ಆರು ತಿಂಗಳಿಂದ ಈ ವಿಷಯದ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿ ತನಿಖೆ ನಡೆಸಿದರು. ವಿಚಾರಣೆಗಳನ್ನೂ ಕೈಗೆತ್ತಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.