ತುಮಕೂರು: ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಶಿರಾದ ತಹಶೀಲ್ದಾರ್ ಕಚೇರಿ ಎದುರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ರೈತರಲ್ಲಿ ಒಬ್ಬರು ಬುಧವಾರ ಸಂಜೆ ಮೃತರಾದರು.
ಮೃತರನ್ನು ಶಿರಾ ತಾಲ್ಲೂಕು ಮೇಕೆರಹಳ್ಳಿ ತಿಮ್ಮರಾಜು (28) ಎಂದು ಗುರುತಿಸಲಾಗಿದೆ. ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದ ಅವರು ಸಂಜೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿ ಸಾವಿಗೀಡಾದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ರೈತರು ಆಸ್ಪತ್ರೆಗೆ ಮುತ್ತಿಗೆ ಹಾಕಿದರು. ಪರಿಸ್ಥಿತಿ ಕೈಮೀರದಂತೆ ತಡೆಯಲು ಆಸ್ಪತ್ರೆ ಒಳಗೆ ಯಾರೂ ಹೋಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು.
ಮಾಜಿ ಸಚಿವ ಬಿ.ಸತ್ಯನಾರಾಯಣ್ ನೇತೃತ್ವದಲ್ಲಿ ಆಸ್ಪತ್ರೆಗೆ ಧಾವಿಸಿದ ಜೆಡಿಎಸ್ ಮುಖಂಡರು, ರೈತರು, ಶಾಸಕ ಟಿ.ಬಿ.ಜಯಚಂದ್ರ, ತಹಶೀಲ್ದಾರ್ ನಾಗಹನುಮಯ್ಯ, ಅರಣ್ಯ ಅಧಿಕಾರಿ ತಿಮ್ಮಯ್ಯ ಅವರೇ ರೈತನ ಸಾವಿಗೆ ಕಾರಣ. ಸಾಗುವಳಿ ಸಕ್ರಮ ಸಂಬಂಧ ರೈತರೊಂದಿಗೆ ಸರಿಯಾಗಿ ವರ್ತಿಸಿದ್ದರೆ ಆತ್ಮಹತ್ಯೆ ಘಟನೆ ನಡೆಯುತ್ತಲೇ ಇರಲಿಲ್ಲ ಎಂದರು.
ಸಾವಿಗೀಡಾದ ತಿಮ್ಮರಾಜು ಕುಟುಂಬಕ್ಕೆ ರೂ 5 ಲಕ್ಷ ಪರಿಹಾರ ಕೊಡದ ಹೊರತು ಆಸ್ಪತ್ರೆಯಿಂದ ಶವ ಸಾಗಿಸುವುದಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಪಟ್ಟು ಹಿಡಿದರು. ಮೃತನ ಕುಟುಂಬಕ್ಕೆ ಜಿಲ್ಲಾಧಿಕಾರಿ ರೂ 1 ಲಕ್ಷ ಪರಿಹಾರ ಘೋಷಿಸಿದ್ದರೂ ಅದಕ್ಕೆ ಜನರು ಒಪ್ಪಲಿಲ್ಲ. ತಡರಾತ್ರಿಯಾದರೂ ರೈತರ ಮನವೊಲಿಸುವ ಜಿಲ್ಲಾಧಿಕಾರಿ ಪ್ರಯತ್ನ ಮುಂದುವರೆದಿತ್ತು.
ಮೃತನ ಪತ್ನಿ ಸುಶೀಲಮ್ಮ ಗೋಳಾಟ ಅಲ್ಲಿದ್ದವರ ಮನ ಕಲಕುವಂತಿತ್ತು. ಹಸುಗೂಸು ಸೇರಿ ಇಬ್ಬರು ಪುಟಾಣಿ ಮಕ್ಕಳಿದ್ದಾರೆ. ಒಂದೂವರೆ ಎಕರೆ ಭೂಮಿಯನ್ನು 15 ವರ್ಷದಿಂದ ಸಾಗುವಳಿ ಮಾಡಿದ್ದು, ಅಡಿಕೆ, ತೆಂಗು ತೋಟ ಮಾಡಲಾಗಿತ್ತು. ಈ ಭೂಮಿ ಸಕ್ರಮ ಮಾಡಲು ಒಪ್ಪದ ತಹಶೀಲ್ದಾರ್ ಸರ್ಕಾರದ ವಶಕ್ಕೆ ಪಡೆಯಲು ಮುಂದಾದ ಹಿನ್ನೆಲೆಯಲ್ಲಿ ತಿಮ್ಮರಾಜು ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದರು.
ತಿಮ್ಮರಾಜು ಸಾವನ್ನಪ್ಪುವ ಕೆಲವೇ ನಿಮಿಷಗಳ ಮುನ್ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಬಗರ್‌ಹುಕುಂ ಸಮಸ್ಯೆ ಇಡೀ ರಾಜ್ಯದಲ್ಲೇ ಇದೆ. ಸರ್ಕಾರ ರೈತರ ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಆತ್ಮಹತ್ಯೆಯ ಮಾರ್ಗ ತುಳಿಯಬಾರದು. ಕುಟುಂಬ, ಮಕ್ಕಳ ಮುಖ ನೋಡಿಯಾದರೂ ಆತ್ಮಹತ್ಯೆಗೆ ಯತ್ನಿಸಬಾರದು ಎಂದು ಧೈರ್ಯ ಹೇಳಿ ತೆರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.