ADVERTISEMENT

ಬಜೆಟ್‌ನಲ್ಲಿ ಅನ್ಯಾಯ: ರೈತ ಬಂಡಾಯದ ಎಚ್ಚರಿಕೆ

ರೈತ ಹುತಾತ್ಮರಿಗೆ ಗೌರವ ಸಲ್ಲಿಸಲು ಬಾರದ ಜಿಲ್ಲಾ ಉಸ್ತುವಾರಿ ಮಂತ್ರಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:59 IST
Last Updated 21 ಜುಲೈ 2013, 19:59 IST
ನರಗುಂದದಲ್ಲಿ ಭಾನುವಾರ ರೈತ ಹುತಾತ್ಮ ದಿನಾಚರಣೆಯಲ್ಲಿ ರಾಜ್ಯ ರೈತ  ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು. ಉಪಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಅನುಸೂಯಮ್ಮ, ವಿಜಯ ಕುಲಕರ್ಣಿ ಚಿತ್ರದಲ್ಲಿದ್ದಾರೆ
ನರಗುಂದದಲ್ಲಿ ಭಾನುವಾರ ರೈತ ಹುತಾತ್ಮ ದಿನಾಚರಣೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು. ಉಪಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಅನುಸೂಯಮ್ಮ, ವಿಜಯ ಕುಲಕರ್ಣಿ ಚಿತ್ರದಲ್ಲಿದ್ದಾರೆ   

ನರಗುಂದ (ಗದಗ ಜಿಲ್ಲೆ): `ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಾಲಿನ ಬಜೆಟ್‌ನಲ್ಲಿ ರೈತರಿಗೆ ಮೋಸ ಮಾಡಿದ್ದಾರೆ. ಹೀಗಾಗಿ ಅವರು ಬರುವ ದಿನಗಳಲ್ಲಿ ರೈತರಿಂದ ವಿರೋಧ ಎದುರಿಸಬೇಕಾಗುತ್ತದೆ. ಎಲ್ಲ ಸರ್ಕಾರಗಳೂ ರೈತರ ಹಿತವನ್ನು ಮರೆತಿದ್ದು  ಮತ್ತೆ ಬಂಡಾಯ ಎದುರಿಸಬೇಕಾಗುತ್ತದೆ' ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಎಚ್ಚರಿಸಿದರು.

ನರಗುಂದ ರೈತ ಬಂಡಾಯಕ್ಕೆ ಕಾರಣರಾದ ರೈತ ಹುತಾತ್ಮ ವೀರಪ್ಪ ಕಡ್ಲಿಕೊಪ್ಪ ಅವರ 34ನೇ ಹುತಾತ್ಮ ದಿನದ ಅಂಗವಾಗಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕಳಸಾ ಬಂಡೂರಿ ಹೋರಾಟ ಸಮಿತಿ ಆಶ್ರಯದಲ್ಲಿ ಭಾನುವಾರ ಇಲ್ಲಿ ನಡೆದ ರೈತರ ಬೃಹತ್ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. 

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಆರ್. ಬಸವರಾಜಪ್ಪ, ಅನಸೂಯಮ್ಮಾ, ವಿಜಯ ಕುಲಕರ್ಣಿ, ಬಸವರಾಜ ಸಾಬಳೆ  ಭಾಗವಹಿಸಿದ್ದರು.

`ರೈತರ ಸಮಸ್ಯೆಗಳು 60 ವರ್ಷಗಳಿಂದ ಹಾಗೆಯೇ ಉಳಿಯಲು ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ. ಕೇಂದ್ರ ಸರ್ಕಾರ ನದಿ ಜೋಡಣೆ ಯೋಜನೆ  ಜಾರಿ ಮಾಡದ ಕಾರಣ ಒಂದೆಡೆ ಪ್ರವಾಹ ಇನ್ನೊಂದೆಡೆ  ಬರ ಎದುರಿಸಬೇಕಾಗಿದೆ' ಎಂದು ನಂತರ ಬಿಜೆಪಿ ಆಶ್ರಯದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು

ಸಮಾರಂಭದಲ್ಲಿ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಪಿ.ಸಿ.ಗದ್ದಿಗೌಡ್ರ, ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಸಂಗನಗೌಡ ಪಾಟೀಲ ಭಾಗವಹಿಸಿದ್ದರು.

ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಿ.ಆರ್.ಯಾವಗಲ್ ಮಾತನಾಡಿ, ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಡ ಹೇರುವುದಾಗಿ ಹೇಳಿದರು.

ರೈತ ಸಂಘದ ಮುಖಂಡ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದರು. ಪ್ರತಿ ಸಲ ರೈತ ಹುತಾತ್ಮ ದಿನಾಚರಣೆಗೆ ರಾಜ್ಯದ ಮಂತ್ರಿಗಳು ಆಗಮಿಸುತ್ತಿದ್ದರು. ಆದರೆ ಈ ಸಲ ಯಾವ ಮಂತ್ರಿಗಳು ಬರಲೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲರು ಬಾರದೇ ಇರುವುದು ರೈತರ ಅಸಮಾಧಾನಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.