ADVERTISEMENT

ಬಜೆಟ್ ಬಾಕ್ಸ್ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 18:45 IST
Last Updated 24 ಫೆಬ್ರುವರಿ 2011, 18:45 IST

ಬೆಂಗಳೂರು: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಿಂದ ಬಜೆಟ್ ಸೂಟ್‌ಕೇಸ್ ಹಿಡಿದು ಬಸವೇಶ್ವರ ವೃತ್ತದವರೆಗೆ ರೈತರೊಂದಿಗೆ ಹೆಜ್ಜೆ ಹಾಕಿದರು.

ಬಜೆಟ್ ಮಂಡನೆಯ ನಂತರವೂ ಹೊಸದೊಂದು ಪದ್ಧತಿಗೆ ನಾಂದಿ ಹಾಡಿದ ಮುಖ್ಯಮಂತ್ರಿಗಳು ಸ್ವಾತಂತ್ರ್ಯ ಉದ್ಯಾನಕ್ಕೆ ತೆರಳಿ ಕೃಷಿ ಬಜೆಟ್‌ನ ಪ್ರತಿಯನ್ನು ರೈತರಿಗೆ ಹಸ್ತಾಂತರಿಸಿದರು. ಬಜೆಟ್ ಮಂಡನೆಗೆ ತಮ್ಮ ನಿವಾಸದಿಂದ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಹೊರಟ ಮುಖ್ಯಮಂತ್ರಿಗಳಿಗೆ ಅದಾಗಲೇ ನಿವಾಸದ ಎದುರು ನೆರೆದಿದ್ದ ರೈತ ಮಹಿಳೆಯರು ಆರತಿ ಎತ್ತಿ ಶುಭ ಕೋರಿದರು.

ನಂತರ ನೂರಾರು ಸಂಖ್ಯೆಯ ರೈತರೊಂದಿಗೆ ಯಡಿಯೂರಪ್ಪ ಅವರು ಬಸವೇಶ್ವರ ವೃತ್ತದತ್ತ ಕಾಲ್ನಡಿಗೆಯಲ್ಲಿ ಸಾಗಿದರು. ಕಾಲ್ನಡಿಗೆ ಸಾಗಿದ ಮಾರ್ಗದುದ್ದಕ್ಕೂ ರೈತರು ಮುಖ್ಯಮಂತ್ರಿಗಳಿಗೆ ಜೈಕಾರ ಹಾಕುತ್ತಿದ್ದರು.

ಈ ವೇಳೆ ಸಚಿವರಾದ ಉಮೇಶ್ ಕತ್ತಿ, ಎಂ.ಪಿ. ರೇಣುಕಾಚಾರ್ಯ, ಆರ್. ಅಶೋಕ, ಸಾವಯವ ಕೃಷಿ ಮಿಷನ್‌ನ ಅಧ್ಯಕ್ಷ ಡಾ.ಎ.ಎಸ್. ಆನಂದ ಮತ್ತಿತರರು ಮುಖ್ಯಮಂತ್ರಿಗಳ ಜೊತೆಗಿದ್ದರು. ಬಸವೇಶ್ವರ ವೃತ್ತದಲ್ಲಿ ತೆರೆದ ಜೀಪನ್ನೇರಿದ ಮುಖ್ಯಮಂತ್ರಿಗಳು ಅಲ್ಲಿ ರೈತರು ಹಾಡಿದ ‘ನೇಗಿಲ ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ...’ ರೈತ ಗೀತೆಗೆ ಚಪ್ಪಾಳೆ ತಟ್ಟುವುದರ ಮೂಲಕ ಸಂಭ್ರಮಿಸಿದರು.

ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ರೈತರು ರೈತಗೀತೆ ಹಾಡಿದ ನಂತರ ಸ್ವಾತಂತ್ರ್ಯ ಉದ್ಯಾನವನದತ್ತ ತೆರಳಿದರು.
ತಮ್ಮ ಜೊತೆ ರೈತರನ್ನು ವಿಧಾನಸೌಧದವರೆಗೂ ಕರೆದೊಯ್ಯುವ ಹಂಬಲ ಮುಖ್ಯಮಂತ್ರಿಗಳಿತ್ತು ಆದರೆ ಭದ್ರತೆಯ ದೃಷ್ಟಿಯಿಂದ ಈ ಯೋಚನೆಯನ್ನು ಕೈಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.