ADVERTISEMENT

ಬಜೆ ಜಲಾಶಯ ಭರ್ತಿ; ಅಂತರ್ಜಲ ವೃದ್ಧಿ

ವಾರದ ಮೊದಲೇ ಉಡುಪಿಗೆ ಕಾಲಿಟ್ಟ ಮುಂಗಾರು, ಕೃಷಿ ಚಟುವಟಿಕೆಗೆ ಜೀವಕಳೆ

​ಪ್ರಜಾವಾಣಿ ವಾರ್ತೆ
Published 29 ಮೇ 2018, 19:30 IST
Last Updated 29 ಮೇ 2018, 19:30 IST
ಉಡುಪಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿರುವ ರಸ್ತೆ
ಉಡುಪಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿರುವ ರಸ್ತೆ   

ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಿರಿಯಡಕಲ್ಲಿರುವ ಬಜೆ ಜಲಾಶಯ ಭರ್ತಿಯಾಗಿದೆ. ಜಿಲ್ಲೆಯ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಜತೆಗೆ ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಜೀವಕಳೆ ಬಂದಿದೆ.

ನಗರಸಭೆ ವ್ಯಾಪ್ತಿಗೆ ನೀರು ಪೂರೈಸುವ ಸಮೀಪದ ಬಜೆ ಜಲಾಶಯ ಈ ಬಾರಿ ತುಂಬಿರುವುದು ನಾಗರಿಕರಲ್ಲಿ ಸಂತಸವನ್ನುಂಟು ಮಾಡಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ 5 ಮೀಟರ್‌ನಷ್ಟಿದ್ದ ಜಲಾಶಯದ ನೀರಿನ ಪ್ರಮಾಣ, ಸದ್ಯ ಗರಿಷ್ಠ ಮಟ್ಟವಾದ 6 ಮೀಟ‌‌ರ್ ತಲುಪಿದೆ. ಜತೆಗೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣವೂ ಹೆಚ್ಚಿದ್ದು, ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತಿದೆ.

ಘಟ್ಟ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಅವಧಿಗೂ ಮುನ್ನವೇ ಮುಂಗಾರು ಜಿಲ್ಲೆಯನ್ನು ಪ್ರವೇಶಿಸಿದ್ದು ಹಾಗೂ ಬಜೆ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ ಸದ್ಯಕ್ಕೆ ನೀರಿನ ಸಮಸ್ಯೆ ತಲೆದೋರದು ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ಈ ಬಾರಿ ಮುಂಗಾರು ವಿಳಂಬವಾಗಿದ್ದರೆ ಮೇ ಅಂತ್ಯಕ್ಕೆ ಅಥವಾ ಜೂನ್‌ನಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿತ್ತು. ಈ ಬಾರಿ ಬೇಸಿಗೆಯಲ್ಲಿ ಬಿಸಿಲಿನ ಝಳವೂ ಹೆಚ್ಚಿದ್ದರಿಂದ ಜನರು ಹೈರಾಣಾಗಿದ್ದರು. ವರುಣನ ನಿರೀಕ್ಷೆಯಲ್ಲಿದ್ದ ನಾಗರಿಕರಿಗೆ ಮಳೆ ತಂಪೆರೆದಿದೆ.

ಅಂತರ್ಜಲ ಮಟ್ಟ ಹೆಚ್ಚಳ: ಎಡೆಬಿಡದೆ ಮಳೆ ಸುರಿಯುತ್ತಿದ್ದು, ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಬಾವಿಗಳೆಲ್ಲವೂ ಮರುಪೂರಣಗೊಂಡಿವೆ. ಕೆಲ ವಾರಗಳ ಹಿಂದಷ್ಟೇ ಬಿಸಿಲಿನ ಝಳಕ್ಕೆ ಮನೆಯ ಮುಂದಿನ ಬಾವಿಗಳಲ್ಲಿ ನೀರು ತಳ ತಲುಪಿತ್ತು. ಕುಡಿಯವ ನೀರಿನ ಸಮಸ್ಯೆ ಉದ್ಭವಿಸುವ ಎಲ್ಲ ಲಕ್ಷಣಗಳು ಗೋಚರಿಸಿದ್ದವು.

ಕಳೆದ ವರ್ಷ ಇದೇ ಅವಧಿಯಲ್ಲಿ ಬಜೆ ಜಲಾಶಯ ಬರಿದಾಗಿತ್ತು. ಜಲಾಶಯದ ದೊಡ್ಡ ಹೊಂಡಗಳಲ್ಲಿದ್ದ ನೀರನ್ನೇ ಪಂಪ್‌ ಮಾಡಿ ನಗರ‌ಕ್ಕೆ ಪೂರೈಕೆ ಮಾಡಲಾಗುತ್ತಿತ್ತು. ಜತೆಗೆ ಟ್ಯಾಂಕರ್ ಮೂಲಕವೂ ನೀರು ಸರಬರಾಜು ಮಾಡಲಾಗಿತ್ತು. ಇದಕ್ಕಾಗಿ ನಗರಸಭೆ ಲಕ್ಷಾಂತರ ರೂಪಾಯಿಯನ್ನೂ ವ್ಯಯಿಸಿತ್ತು. ಈ ಬಾರಿ ನಗರಸಭೆಗೆ ಆರ್ಥಿಕ ಹೊರೆ ಕಡಿಮೆಯಾದಂತಾಗಿದೆ. ಮಳೆಗಾಲ ಆರಂಭದಿಂದಾಗಿ ಈ ಭಾಗದಲ್ಲಿ ಕೃಷಿ ಚಟುವಟಿಕೆಗಳೂ ಬಿರುಸಾಗಲಿವೆ. ಒಟ್ಟಾರೆ ಮಳೆಯು ಜನರಲ್ಲಿ ನೆಮ್ಮದಿ ಮೂಡಿಸಿದೆ.

ಮಂಗಳೂರಿಗೆ ಇಲ್ಲ ನೀರಿನ ಬವಣೆ

ತುಂಬೆ ಅಣೆಕಟ್ಟೆಯಲ್ಲಿ ಈ ಬಾರಿ ಬಿರು ಬೀಸಿಗೆಯಲ್ಲೂ ನೀರಿನ ಮಟ್ಟ 4 ಮೀಟರ್‌ಗಿಂತ ಕುಸಿದಿರಲಿಲ್ಲ. ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಮೇ ತಿಂಗಳಲ್ಲಿ ಹಲವು ಬಾರಿ ಮಳೆ ಸುರಿದುದರಿಂದ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಆರಂಭವಾಗಿತ್ತು. ಹೀಗಾಗಿ ತುಂಬೆ ಅಣೆಕಟ್ಟೆಯಲ್ಲಿ ಮೇ ಕೊನೆಯ ವಾರ ನೀರಿನ ಮಟ್ಟ ಹೆಚ್ಚತೊಡಗಿತ್ತು. ಇದೀಗ ವಾರದ ಮೊದಲೇ ಮಳೆ ಆರಂಭವಾಗಿರುವುದರಿಂದ ಮಂಗಳೂರಿಗೆ ಈ ಬಾರಿ ಕುಡಿಯುವ ನೀರಿನ ಚಿಂತಯೇ ಇಲ್ಲವಾಗಿದೆ.

ಎರಡು ವರ್ಷಗಳ ಹಿಂದೆ ಮಳೆ ವಿಳಂಬವಾಗಿದ್ದು, ಬೇಸಿಗೆಯಲ್ಲಿ ಮಳೆ ಬಾರದೆ ಇದ್ದುದರಿಂದ ಕುಡಿಯುವ ನೀರಿಗೆ ತೀವ್ರ ಬರಗಾಲ ಉಂಟಾಗಿತ್ತು. ಎಂಆರ್‌ಪಿಎಲ್‌ ತೈಲ ಶುದ್ಧೀಕರಣ ಘಟಕವನ್ನೂ ಸುಮಾರು 1 ತಿಂಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಮುಖ್ಯಾಂಶಗಳು

* ಕರಾವಳಿಗೆ ಅಧಿಕೃತವಾಗಿ ಪ್ರವೇಶಿಸಿದ ಮುಂಗಾರು ಮಳೆ

* ಇದು ಚಂಡಮಾರುತ ಅಲ್ಲ, ಮುಂಗಾರು ಮಳೆ–ದ.ಕ.ಜಿಲ್ಲಾಧಿಕಾರಿ ಸ್ಪಷ್ಟನೆ

* ತುಂಬೆ, ಬಜೆ ಜಲಾಶಯ ಭರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.