ADVERTISEMENT

ಬಣ್ಣ ಬಳಿವವರ ಬದುಕು ರಕ್ತದ ಮಡುವಲ್ಲಿ.....

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST

ಮಂಗಳೂರು: ಅವರೆಲ್ಲ ಹೊಟ್ಟೆಪಾಡಿಗಾಗಿ ಬಣ್ಣ ಬಳಿಯುವ ವೃತ್ತಿಯಲ್ಲಿ ತೊಡಗಿದ್ದವರು. ಲಗುಬಗೆಯಿಂದ ಬೇಗನೇ ಕೆಲಸ ಮುಗಿಸಿ, ಉಳಿದ ಅರ್ಧ ದಿನ ರಜೆಯ ಮಜವನ್ನು ಸವಿಯುವ ಮನೆ ಸೇರುವ ತವಕದಲ್ದ್ದ್‌ದಾಗಲೇ, ಮೈ-ಕೈಗಂಟಿದ್ದ ಬಣ್ಣ ಇನ್ನೂ ಹಸಿಯಾಗಿರುವಾಗಲೇ ಅವರು ರಕ್ತದ ಮಡುವಿನಲ್ಲಿ ಇದ್ದರು.

ಜೋಕಟ್ಟೆಯಲ್ಲಿ ಭಾನುವಾರ ಎಂಟು ಮಂದಿಯ ದಾರುಣ ಸಾವಿಗೆ ಕಾರಣವಾದ ಅಪಘಾತದಲ್ಲಿ ಬದುಕುಳಿದವರ ಗೋಳು ಇನ್ನೂ ದಯನೀಯ. ಒಬ್ಬರ ಕಾಲು ಮುರಿದಿದ್ದರೆ ಇನ್ನೊಬ್ಬರ ಕೈಗೆ ಪೆಟ್ಟಾಗಿದೆ. ಬದುಕುಳಿದ ಬಹುತೇಕರು ಸ್ವತಂತ್ರವಾಗಿ ಜೀವನ ನಡೆಸುವ ಸ್ಥಿತಿ ಇಲ್ಲ! 

ಪೇಂಟಿಂಗ್ ಕೆಲಸ ಮಾಡಿ ಕುಟುಂಬದ ಪೋಷಣೆಗೆ ಬಿಡಿಗಾಸು ಸಂಪಾದಿಸಲು ದೂರದ ಒಡಿಶಾ, ಬಿಹಾರ ಹಾಗೂ ರಾಜ್ಯದ ಬಿಹಾರ ಮೂಲದಿಂದ ಬಂದ ಕಾರ್ಮಿಕರು ಇವರು. ವಾರದ ರಜಾದಿನವೂ ಹೆಚ್ಚುವರಿ ದುಡಿಮೆ ಮಾಡಿ ಮನೆಗೆ ಸಾಧ್ಯವಾದಷ್ಟು ಹೆಚ್ಚು ಹಣ ಕಳುಹಿಸುವ ಆಲೋಚನೆಯಲ್ಲಿದ್ದ ಅವರು ಈಗ ಮನೆಯವರನ್ನೂ ಸಂಪರ್ಕಿಸಲಾಗದೇ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ್ದಾರೆ.

`ನಾನು ಒಡಿಶಾದ ಕರಂಜಿಯಾದಿಂದ ಬಂದಿದ್ದೇನೆ. ಇಲ್ಲಿ ಪೇಂಟಿಂಗ್ ಕೆಲಸಕ್ಕೆ ದಿನಕ್ಕೆ ರೂ 275 ಸಂಬಳ ಕೊಡುತ್ತಿದರು. ನಮ್ಮೂರಿನಲ್ಲಿ ಅಷ್ಟು ಸಂಬಳದ ಕೆಲಸ ಸಿಗುವುದಿಲ್ಲ. ಇಲ್ಲಿ ಕೆಲಸ ಆರಂಭಿಸಿ ಮೂರ‌್ನಾಲ್ಕು ತಿಂಗಳು ಕಳೆದಿದೆ. ಅಷ್ಟರಲ್ಲೇ ಹೀಗಾಗಿದೆ~ ಎಂದು ಗುರುಚರಣ್ ಬೇಸರ ತೋಡಿಕೊಂಡರು.

`ನಾವು ಬರುತ್ತಿದ್ದ ವಾಹನ ವೇಗವಾಗಿ ರಸ್ತೆ ಬಿಟ್ಟು ಸಾಗಿದ್ದಷ್ಟೆ ಗೊತ್ತು. ಮತ್ತೇನಾಯಿತೋ ತಿಳಿಯದು. ನಾವು ಮೂರು ಮಂದಿ ಒಟ್ಟಿಗಿದ್ದೆವು. ನನ್ನ ಜತೆ ಇದ್ದವರಿಗೆ ಏನಾಗಿದೆಯೋ ತಿಳಿಯದು. ಮನೆಯವರಿಗೂ ಅಪಘಾತದ ವಿಷಯ ತಿಳಿಸಲು ಸಾಧ್ಯವಾಗಿಲ್ಲ~ ಎಂದು ಅವರು ತಿಳಿಸಿದರು.

`ತಂದೆ-ತಾಯಿಗೆ ನಾವು ನಾಲ್ವರು ಮಕ್ಕಳು. ಅಕ್ಕನಿಗೆ ಮದುವೆಯಾಗಿದೆ. ತಂಗಿ ತಮ್ಮ ಕಲಿಯುತ್ತಿದ್ದಾರೆ. ಕುಟುಂಬದ ಹೊಣೆ ನನ್ನ ಮೇಲೆಯೇ ಇತ್ತು. ಜೂನ್‌ನಲ್ಲಿ ಊರಿಗೆ ಮರಳುವ ಆಲೋಚನೆಯಲ್ಲಿದ್ದೆ. ಈ ಸ್ಥಿತಿಯಲ್ಲಿ ನಾನು ಮನೆಗೆ ಮರಳುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತಾರೆ ಒಡಿಶಾದ ಭುವನೇಶ್ವರದ ಹೇಮಂತ್. ಅವರು ಎರಡು ತಿಂಗಳ ಹಿಂದಷ್ಟೇ ಮಂಗಳೂರಿಗೆ ಆಗಮಿಸ್ದ್ದಿದರು. 

`ಸಫೀಯಾನ್ ನಮ್ಮನ್ನು ಇಲ್ಲಿಗೆ ಕರೆತಂದಿದ್ದರು. ನಮ್ಮ ಜತೆ ಇದ್ದವರು ಏನಾಗಿದ್ದಾರೋ ತಿಳಿಯದು~ ಎಂದು ಅವರು ತಿಳಿಸಿದರು.  ಒಡಿಶಾದ ಕರ್ಣೇಶ್ವರ್ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಅವರಿಗೆ ಮಲಗಿದ್ದಲ್ಲಿಂದ ಏಳಲೂ ಸಾಧ್ಯವಿಲ್ಲದ ಸ್ಥಿತಿ. ಅವರಿಗೆ  ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ. ಇಲ್ಲಿಗೆ ಬಂದು ಎಂಟು ತಿಂಗಳು ಕಳೆದಿದೆ. ಊರಿಗೆ ಹೊರಡುವ ತಯಾರಿಯಲ್ಲಿದ್ದಾಗಲೇ ದುರ್ಘಟನೆ ನಡೆದಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.