ADVERTISEMENT

ಬದಲಾಯಿಸಿದ್ದ ಹೆಸರಲ್ಲೇ ಇತ್ತು ಡಿ.ಸಿ!

ಚಂದ್ರಹಾಸ ಹಿರೇಮಳಲಿ
Published 1 ಜೂನ್ 2017, 19:30 IST
Last Updated 1 ಜೂನ್ 2017, 19:30 IST
ತಾಯಿ ಮಮತಾ ಪುತ್ರ ಧ್ಯಾನಚಂದ್ರ ಅವರಿಗೆ ಸಿಹಿ ತಿನ್ನಿಸಿದರು. ತಂದೆ ಹಾಲೇಶಪ್ಪ, ಸಹೋದರ ಪೂರ್ಣಚಂದ್ರ ಇದ್ದಾರೆ
ತಾಯಿ ಮಮತಾ ಪುತ್ರ ಧ್ಯಾನಚಂದ್ರ ಅವರಿಗೆ ಸಿಹಿ ತಿನ್ನಿಸಿದರು. ತಂದೆ ಹಾಲೇಶಪ್ಪ, ಸಹೋದರ ಪೂರ್ಣಚಂದ್ರ ಇದ್ದಾರೆ   

ಶಿವಮೊಗ್ಗ: ಹುಟ್ಟಿದಾಗ ಇಟ್ಟಿದ್ದ ಹೆಸರು ಅಮಾನ್‌. 7ನೇ ತರಗತಿಯಲ್ಲಿದ್ದಾಗ ಪೋಷಕರು ‘ಧ್ಯಾನಚಂದ್ರ’ ಎಂದು ಹೆಸರು ಬದಲಿಸಿದ್ದರು. ಹೆಸರಿನ ಜತೆ ಅದೃಷ್ಟವೂ ಬದಲಾಯಿತು.

ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸಿದ ನಾಗರಿಕ ಸೇವಾ ಪರೀಕ್ಷಾ ಫಲಿತಾಂಶದಲ್ಲಿ 47ನೇ ರ್‍ಯಾಂಕ್‌ ಪಡೆದ ಇಲ್ಲಿನ ವಿನೋಬನಗರ ಲಕ್ಷ್ಮೀಪುರ ಬಡಾವಣೆಯ ಎಚ್‌.ಎಂ.ಧ್ಯಾನಚಂದ್ರ ಅವರ ಯಶಸ್ವಿನ ಗುಟ್ಟು.

ಪ್ರೌಢಶಾಲೆಗೆ ಹೋಗುವಾಗ ಶಿಕ್ಷಕರು, ಸಹಪಾಠಿಗಳು ಧ್ಯಾನಚಂದ್ರ ಅವರನ್ನು ಸಂಕ್ಷಿಪ್ತವಾಗಿ ‘ಡಿ.ಸಿ’ ಎಂದೇ ಸಂಬೋಧಿಸುತ್ತಿದ್ದರು. ಕಾಲೇಜು ಮೆಟ್ಟಿಲು ಏರಿದಾಗಲೂ ಅದೇ ಹೆಸರು ಅಂಟಿಕೊಂಡಿತ್ತು. ಅದರಿಂದ ಉತ್ತೇಜನಗೊಂಡ ಅವರು ಅಂದೇ ಡಿಸಿ (ಜಿಲ್ಲಾಧಿಕಾರಿ) ಆಗುವ ಸಂಕಲ್ಪ ಕೈಗೊಂಡರು.

ADVERTISEMENT

ತಾಯಿ ಮಮತಾ ಪ್ರಾಥಮಿಕ ಶಾಲಾ ಶಿಕ್ಷಕಿ. ತಂದೆ ಹಾಲೇಶಪ್ಪ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಎಂಜಿನಿಯರ್‌. ಈ ದಂಪತಿಗೆ ಇಬ್ಬರು ಪುತ್ರರು. ಇನ್ನೊಬ್ಬ ಮಗ ಪೂರ್ಣಚಂದ್ರ 10ನೇ ತರಗತಿ ಓದುತ್ತಿದ್ದಾನೆ.

ಅಪ್ಪ ನೌಕರಿಯಲ್ಲಿದ್ದ ಕಾರಣ ಎರಡು ಮೂರು ವರ್ಷಗಳಿಗೆ ಒಮ್ಮೆ ಶಾಲೆ ಬದಲಿಸುತ್ತಿದ್ದರು. ಹಾಗಾಗಿ, ಹರಿಹರ, ಶಿಕಾರಿಪುರ, ಶಿವಮೊಗ್ಗ, ಮಂಗಳೂರು, ಮಣಿಪಾಲದಲ್ಲಿ ಕಲಿಕೆ ಅವಕಾಶ ಲಭಿಸಿತ್ತು. ಸಿವಿಲ್‌ ಎಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್‌ ಆಗಿ ವೃತ್ತಿಬದುಕು ಆರಂಭಿಸಿದ್ದರು.

ಕೆಎಎಸ್‌ನಲ್ಲೂ ಆಯ್ಕೆ: ಕೆಪಿಎಸ್‌ಸಿ ಈಚೆಗೆ ಪ್ರಕಟಿಸಿದ ಕೆಎಎಸ್‌ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲೂ ಧ್ಯಾನಚಂದ್ರ  ಸ್ಥಾನ ಪಡೆದಿದ್ದಾರೆ. 1,115 ಅಂಕ ಪಡೆದು ವಾಣಿಜ್ಯ ತೆರಿಗೆ ಅಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದರು.

ಎರಡನೇ ಪ್ರಯತ್ನದಲ್ಲೇ ಐಎಎಸ್‌: 2015ರಲ್ಲಿ ಮೊದಲ ಬಾರಿ ನಾಗರಿಕ ಸೇವಾ ಪರೀಕ್ಷೆ ಎದುರಿಸಿದ್ದ ಅವರು ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು. ಪೂರ್ವಭಾವಿ ಪರೀಕ್ಷೆಯಲ್ಲೇ ಎಡವಿದ್ದ ಅವರು, ನಂತರ ಎಲ್ಲ ಲೋಪಗಳನ್ನೂ ತಿದ್ದಿಕೊಂಡು ಎರಡನೇ ಪ್ರಯತ್ನದಲ್ಲೇ ಯಶ ಕಂಡಿದ್ದಾರೆ.

ಕನ್ನಡ ಆಯ್ಕೆ ಮಾಡಿಕೊಂಡ ಆಂಗ್ಲ ಮಾಧ್ಯಮ ವಿದ್ಯಾರ್ಥಿ: ಬಾಲ್ಯದಿಂದಲೂ ಇಂಗ್ಲಿಷ್‌ ಮಾಧ್ಯಮದಲ್ಲೇ ಓದಿದ್ದ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆ ಮಾಡಿಕೊಂಡ ಐಚ್ಚಿಕ ವಿಷಯ ಕನ್ನಡ. ಕೆಎಎಸ್‌ ಪರೀಕ್ಷೆಯಲ್ಲಿ ಭೂಗೋಳ ವಿಷಯ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಕನ್ನಡದಲ್ಲಿ ಹೆಚ್ಚು ಅಂಕ     ಗಳಿಸಬಹುದು ಎಂಬ ಹಿತೈಷಿಗಳ ಸಲಹೆಗೆ ಮನ್ನಣೆ ನೀಡಿ, ಮಾತೃಭಾಷೆಗೆ ಆದ್ಯತೆ ನೀಡಿದ್ದರು. ಕೇವಲ ಆರು ತಿಂಗಳು ಕನ್ನಡ ಭಾಷಾ ಪುಸ್ತಕಗಳನ್ನು ಓದಿ ಈ ಸಾಧನೆ ಮಾಡಿದ್ದಾರೆ.

‘ಕನ್ನಡ ಆಯ್ಕೆ ಮಾಡಿಕೊಂಡಾಗ ಹಲವರು ಕಾಲೆಳೆದಿದ್ದರು. ಆದರೆ, ಬೆಂಗಳೂರಿನ ತರಬೇತುದಾರರಾದ ವಿನಯ್‌, ಅನುರಾಗ್, ಶ್ರುತಿ ಹಾಗೂ ಪೋಷಕರು ಪ್ರೋತ್ಸಾಹ ನೀಡಿದರು. ಎರಡು ತಿಂಗಳು ಕಷ್ಟ ಎನಿಸಿತ್ತು. ನಿರಂತರ ಓದಿನ ನಂತರ ಎಲ್ಲ ಮನನ ಮಾಡಿಕೊಂಡೆ. ಮೊದಲಿನಿಂದಲೂ ಪತ್ರಿಕೆ ಓದುವ ಅಭ್ಯಾಸ ಇತ್ತು. ಹಾಗಾಗಿ, ಸಾಮಾನ್ಯ ಜ್ಞಾನ ಸಾಕಷ್ಟು ಸಂಪಾದಿಸಿದ್ದೆ. ಪರೀಕ್ಷೆ ತೇರ್ಗಡೆಯಾಗುವ ವಿಶ್ವಾಸವಿತ್ತು. ರ್‍ಯಾಂಕ್‌ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ’ ಎಂದು ಮನದಾಳ ಬಿಚ್ಚಿಟ್ಟರು ಧ್ಯಾನಚಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.