ADVERTISEMENT

ಬದುಕಿನ ಲೆಕ್ಕ ಮುಗಿಸಿದ 'ಮಾನವ ಕಂಪ್ಯೂಟರ್' ಶಕುಂತಲದೇವಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 11:27 IST
Last Updated 21 ಏಪ್ರಿಲ್ 2013, 11:27 IST

ಬೆಂಗಳೂರು :  `ಮಾನವ ಕಂಪ್ಯೂಟರ್' ಎಂದೇ ಹೆಸರಾದ ಸುಪ್ರಸಿದ್ದ ಗಣಿತಜ್ಞೆ ಶಕುಂತಲದೇವಿ ಅವರು ಭಾನುವಾರ ತಮ್ಮ ಬೆಂಗಳೂರಿನ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಸಂಖ್ಯಾಶಾಸ್ತ್ರಜ್ಞೆಯಾಗಿ, ಜ್ಯೋತಿಷಿಯಾಗಿ ಹೆಸರು ಮಾಡಿದ್ದ ಶಕುಂತಲದೇವಿ ಅವರ ಪ್ರತಿಭೆ ಕಂಡು ಸ್ವತ: ಐನ್‌ಸ್ಟೀನ್ ಅವರೇ ಮೂಕವಿಸ್ಮಿತರಾಗಿದ್ದರು.

ಕಂಪ್ಯೂಟರ್ ಒಂದು ವೇಳೆ ತಪ್ಪು ಲೆಕ್ಕಾಚಾರ ಮಾಡಿದರೂ ಶಕುಂತಲದೇವಿ ಅವರ ತಪ್ಪು ಲೆಕ್ಕ ಹೇಳಲು ಸಾಧ್ಯವೇ ಇಲ್ಲ ಎಂದು ಅವರು ಜಗತ್ತಿನಾದ್ಯಂತ ಮನೆಮಾತಾಗಿದ್ದರು.

ಲಂಡನ್‌ನಲ್ಲಿ ಬಿಬಿಸಿ ವಾಹಿನಿಯಲ್ಲಿ ಶಕುಂತಲದೇವಿ ಒಮ್ಮೆ ಪ್ರದರ್ಶನ ನೀಡಿದರು. ಬಿಬಿಸಿ ಕೇಳಿದ ಪ್ರಶ್ನೆಗಳಿಗೆ ಚಿಟಿಕೆ ಹೊಡೆಯುವಷ್ಟರ ವೇಳೆಯಲ್ಲಿ ಉತ್ತರ ನೀಡಿ ಎಲ್ಲರನ್ನೂ ಬೆರಗುಗೊಳಿಸಿದರು. 1977ರಲ್ಲಿ 201 ಸಂಖ್ಯೆಯ 23ನೇ ವರ್ಗಮೂಲವನ್ನು ಕ್ಷಣಮಾತ್ರದಲ್ಲಿ ಮಾನಸಿಕ ಲೆಕ್ಕಾಚಾರ ಮಾಡಿ ಹೇಳಿ ದಾಖಲೆ ಬರೆದಿದ್ದರು.

1939ರ ನವೆಂಬರ್ 4 ರಂದು ಬೆಂಗಳೂರಿನ ಬ್ರಾಹ್ಮಣ ಅರ್ಚಕರ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ತಾತನಿಂದ ಗಣಿತದ ಬಗೆಗೆ ಪ್ರಾಥಮಿಕ ತಿಳಿವಳಿಕೆ ಪಡೆದುಕೊಂಡರು. ತಮ್ಮ 5ನೇ ವಯಸ್ಸಿನ ಹೊತ್ತಿಗಾಗಲೇ ಇವರು ಅಂಕ ಗಣಿತದ ಅತಿ ಕ್ಲಿಷ್ಟಕರ ಸಮಸ್ಯೆಗಳನ್ನು ಅತ್ಯಂತ ವೇಗವಾಗಿ ಮಾನಸಿಕ ಲೆಕ್ಕಾಚಾರದಲ್ಲೇ ಬಗೆಹರಿಸುತ್ತಿದ್ದರು. ತನ್ನ 8ನೇ ವಯಸ್ಸಿನಲ್ಲೇ ಇವರು ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಗಣಕ ವಿಜ್ಞಾನ ವಿಭಾಗವು ಮುಂದಿಟ್ಟ 7,686,369,774,870 ಮತ್ತು 2,465, 099,745,779 ರ ಗುಣಾಕಾರದ ಉತ್ತರವೇನು ? ಎಂಬ ಸವಾಲಿಗೆ ಕೇವಲ 28 ಸೆಕೆಂಡುಗಳಲ್ಲಿ 18,947,668, 177,995426,462,773,730 ಎಂದು ಉತ್ತರ ಹೇಳಿದ್ದು ಇವರ ಹೆಸರನ್ನು ಗಿನ್ನೆಸ್ ದಾಖಲೆಯಲ್ಲಿ ಬರೆದಿಟ್ಟಿತು.

ಆನಂತರ ಇವರ ಖ್ಯಾತಿ ವಿಶ್ವಾದ್ಯಂತ ಹಬ್ಬಿ ದೇಶ ವಿದೇಶದಲ್ಲಿ ಪ್ರವಾಸ ಕೈಗೊಂಡು ಹಲವು ದೇಶ ನಾಯಕರನ್ನು ಭೇಟಿ ಮಾಡಿದರು.
ಅಷ್ಟೇ ಅಲ್ಲದೆ ಇವರು ಅನೇಕ ಪುಸ್ತಕಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಅಸ್ಟ್ರಾಲಜಿ ಫರ್ ಯೂ, ಜಾಯ್ ಆಫ್ ನಂಬರ್ಸ್‌, ಪಜಲ್ಸ್ ಟು ಪಜಲ್ಸ್ ಯು.

ಪ್ರಖ್ಯಾತ ಭವಿಷ್ಯಕಾರರು ಆಗಿದ್ದ ಇವರ ಬಳಿ ಭವಿಷ್ಯ ಕೇಳಲು ರಾಜಕಾರಣಿಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಗಣ್ಯರು ಬರುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.