ADVERTISEMENT

ಬನ್ನೇರುಘಟ್ಟ ಉದ್ಯಾನದಲ್ಲಿ ಬಿಳಿ ಹುಲಿ ದಾಳಿ: ಸಹಾಯಕ ಸಾವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 15:51 IST
Last Updated 7 ಅಕ್ಟೋಬರ್ 2017, 15:51 IST

ಆನೇಕಲ್‌:  ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿಪಾಲಕನ ಸಹಾಯಕರೊಬ್ಬರು ಹುಲಿ ದಾಳಿಗೆ ಶನಿವಾರ ಮೃತಪಟ್ಟಿದ್ದಾರೆ.

ಮೃತರನ್ನು ಆಂಜಿನಿ (40) ಎಂದು ಗುರುತಿಸಲಾಗಿದೆ. ಅವರು ಜೈವಿಕ ಉದ್ಯಾನದ ಹುಲಿಧಾಮದಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು.

ಸಂಜೆ ಅವರು ಹುಲಿಗಳಿಗೆ ಆಹಾರ ನೀಡಲು ತೆರಳಿದ್ದರು.  ಈ ಸಂದರ್ಭದಲ್ಲಿ ಬನ್ನೇರುಘಟ್ಟ ಸಫಾರಿಯ ಬಿಳಿ ಹುಲಿ ‘ಸೌಭಾಗ್ಯ’ಳ ಹನ್ನೊಂದು ತಿಂಗಳ ಎರಡು ಮರಿಗಳು ದಾಳಿ ನಡೆಸಿವೆ. ಅವು ಪರಚಿದ್ದರಿಂದ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ADVERTISEMENT

ಮಾಂಸ ನೀಡುವಾಗ ಹುಲಿಗಳು ಪಂಜರಕ್ಕೆ ಹೋದ ನಂತರ ಆವರಣಕ್ಕೆ ತೆರಳಿ ಆಹಾರ ನೀಡಬೇಕು. ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಅವರನ್ನು ಅಕ್ಟೋಬರ್‌ 1ರಂದು ಹುಲಿ ಸಫಾರಿಯ ಪ್ರಾಣಿ ಪಾಲಕನ ಸಹಾಯಕನಾಗಿ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು. ಹುಲಿಗಳ ಚಲನವಲನ ಹಾಗೂ ನಡವಳಿಕೆ ಬಗ್ಗೆ ಅರಿವಿಲ್ಲದ ಅವರು ಮಾಂಸವನ್ನು ನೀಡಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದೆ.

ಆಹಾರ ತೆಗೆದುಕೊಂಡು ಹುಲಿ ಆವರಣಕ್ಕೆ ಹೋದಾಗ ಹುಲಿಗಳು ಪಂಜರದಲ್ಲಿ ಇರುವುದಾಗಿ ಭಾವಿಸಿದ್ದಾರೆ. ಒಳ ಹೋದಾಗ ಆವರಣದಲ್ಲೇ ಇದ್ದ ಮರಿ ಹುಲಿಗಳು ದಾಳಿ ನಡೆಸಿವೆ. ಎರಡೂ ಮರಿ ಹುಲಿಗಳು ಪರಚಿ ಗಾಯಗೊಳಿಸಿವೆ.  ತೀವ್ರ ರಕ್ತಸ್ರಾವದಿಂದ ಆಂಜಿನಿ ಮೃತಪಟ್ಟಿದ್ದಾರೆ.

ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಅಲಗರಾಜ ಎಂದೇ ಪರಿಚಿತರಾದ ಅವರಿಗೆ ಪತ್ನಿ ಅಕ್ಕಮಾದಮ್ಮ, ಮಕ್ಕಳಾದ ದೇವರಾಜ ಮತ್ತು ಧರ್ಮರಾಜ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.