ADVERTISEMENT

ಬರಕ್ಕೆ ಭಿನ್ನದನಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಬೆಂಗಳೂರು: ವಾಡಿಕೆಗಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ 84 ತಾಲ್ಲೂಕುಗಳು ಬರಪೀಡಿತ ಎಂದು ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಈ ತೀರ್ಮಾನದ ಕುರಿತು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ `ವಿಭಿನ್ನ ಅಭಿಪ್ರಾಯ~ ವ್ಯಕ್ತಪಡಿಸಿದೆ.

ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಶೇಕಡ 4ರಷ್ಟು ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಬೆಂಗಳೂರು ಕೇಂದ್ರದ ನಿರ್ದೇಶಕ ಬಿ. ಪುಟ್ಟಣ್ಣ ಹೇಳಿದ್ದಾರೆ. ಇದಕ್ಕೆ ವ್ಯತಿರಿಕ್ತವಾದ ಮಾಹಿತಿ ನೀಡಿರುವ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕ ಡಾ.ಎಸ್. ಪ್ರಕಾಶ್ ವಾಡಿಕೆಗಿಂತ ಶೇಕಡ 4ರಷ್ಟು ಕಡಿಮೆ ಮಳೆಯಾಗಿದೆ ಎಂದಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿಲ್ಲ. ಆ ಹಿನ್ನೆಲೆಯಲ್ಲಿ ನೋಡಿದರೆ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ. ಆದರೆ, ಕೃಷಿ ಚಟುವಟಿಕೆಗಳಿಗೆ ಅಡಚಣೆ ಆಗುವಂಥ `ಬರ~ ಪರಿಸ್ಥಿತಿ ರಾಜ್ಯದಲ್ಲಿದೆ ಎಂದು ಪುಟ್ಟಣ್ಣ ಅವರು `ಪ್ರಜಾವಾಣಿ~ಗೆ ತಿಳಿಸಿದರು.

`1951ರಿಂದ 2000ನೇ ಇಸವಿಯವರೆಗೆ ಆಗಿರುವ ಮಳೆ ಪ್ರಮಾಣದ ಸರಾಸರಿ ಆಧಾರದ ಮೇಲೆ ವಾಡಿಕೆ ಮಳೆಯನ್ನು ನಿರ್ಧರಿಸಲಾಗುತ್ತದೆ. ಇಷ್ಟು ವರ್ಷಗಳ ಮಳೆ ಪ್ರಮಾಣದ ದಾಖಲೆಗಳನ್ನು ಕೆಎಸ್‌ಎನ್‌ಡಿಎಂಸಿಯವರು ಐಎಂಡಿಯಿಂದಲೇ ಪಡೆದುಕೊಂಡಿದ್ದಾರೆ.

ಆದರೆ ಅವರು ಹಳೆಯ ಮಾನದಂಡಗಳನ್ನೇ ಅನುಸರಿಸುತ್ತಿದ್ದಾರೆ. ನಮ್ಮದು ಹೊಸ ಮಾನದಂಡಗಳಾದ ಕಾರಣ ಮಳೆ ಪ್ರಮಾಣದ ಅಂದಾಜಿನಲ್ಲಿ ವ್ಯತ್ಯಾಸ ಕಂಡುಬಂದಿದೆ~ ಎಂದು ಪುಟ್ಟಣ್ಣ ವಿವರಿಸಿದರು.

`ಖಚಿತ ಅಂಕಿಅಂಶ~: ಐಎಂಡಿಯವರ ವಾದವನ್ನು ಅಲ್ಲಗಳೆಯುವ ಡಾ. ಪ್ರಕಾಶ್, `ಮಳೆ ಪ್ರಮಾಣದ ಕುರಿತು ಕೆಎಸ್‌ಎನ್‌ಡಿಎಂಸಿ ನೀಡಿರುವ ಅಂಕಿಅಂಶಗಳು ನಿಖರವಾಗಿವೆ. ಶನಿವಾರದ ವೇಳೆಗೆ ರಾಜ್ಯದಲ್ಲಿ ವಾಡಿಕೆಗಿಂತ ಶೇಕಡ 6ರಷ್ಟು ಕಡಿಮೆ ಪ್ರಮಾಣದ ಮಳೆಯಾಗಿದೆ~ ಎಂದು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.