ADVERTISEMENT

ಬರಿದಾಗುತ್ತಿದೆ ತುಂಗಭದ್ರಾ ಜಲಾಶಯ..!

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 19:30 IST
Last Updated 25 ಏಪ್ರಿಲ್ 2012, 19:30 IST

ಬಳ್ಳಾರಿ: ಅನೇಕ ವರ್ಷಗಳ ನಂತರ ಜಿಲ್ಲೆಯ ಹೊಸಪೇಟೆ ಬಳಿಯಿರುವ ತುಂಗಭದ್ರಾ ಜಲಾಶಯ ಬರಿದಾಗುತ್ತ ಸಾಗಿದೆ.

133 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 30 ಟಿಎಂಸಿ ಅಡಿಗೂ ಹೆಚ್ಚು  ಹೂಳು ತುಂಬಿದ್ದು, ಕೇವಲ 100 ಟಿಎಂಸಿ ಅಡಿಯಷ್ಟು ಮಾತ್ರವೇ ನೀರು ಸಂಗ್ರಹವಾಗುತ್ತಿದೆ. ಬುಧವಾರ ಜಲಾಶಯದಲ್ಲಿ ಕೇವಲ 2.675 ಟಿಎಂಸಿ ಅಡಿ ನೀರಿತ್ತು. ಕಳೆದ ವರ್ಷ ಇದೇ ದಿನ 5.192 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು.

ಜಲಾನಯನ ಪ್ರದೇಶದಲ್ಲಿ ಅಲ್ಲಲ್ಲಿ ಮಳೆಯಾಗಿರುವುದರಿಂದ ಒಂದು ವಾರದಿಂದ ಅಷ್ಟಿಷ್ಟು ನೀರು ಜಲಾಶಯಕ್ಕೆ ಹರಿದುಬರುತ್ತಿದ್ದು, ಸದ್ಯ 1289 ಕ್ಯೂಸೆಕ್ ಒಳಹರಿವು ಇದೆ.

ವಿಜಯನಗರ ಸಾಮ್ರಾಜ್ಯದ ಕಾಲದಿಂದ ಇರುವ ಬಸವ ಕಾಲುವೆ ಮೂಲಕ ಹೊಸಪೇಟೆ ನಗರ ಮತ್ತು ಸುತ್ತಮುತ್ತಲಿನ ಭಾಗಗಳಿಗೆ ಕುಡಿಯುವ ನೀರು ಪೂರೈಸಲೆಂದೇ ವರ್ಷದಲ್ಲಿ 11 ತಿಂಗಳು ನೀರು ಹರಿಸಲಾಗುತ್ತಿದೆ. ಸದ್ಯ ಹೊರ ಹರಿವಿನ ಪ್ರಮಾಣ 140 ಕ್ಯೂಸೆಕ್ ಇದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಆದರೆ, ಕೆಲವೇ ದಿನಗಳಲ್ಲಿ ಕಾಲುವೆಗೂ ಹರಿಸಲಾಗದಷ್ಟು ಪ್ರಮಾಣದಲ್ಲಿ ನೀರು ಖಾಲಿ ಆಗುವುದರಿಂದ ಹೊಸಪೇಟೆ ಜನತೆಗೆ ನೀರು ಪೂರೈಕೆಗೂ ತೊಂದರೆಯಾಗುವ ಭೀತಿ ಇದೆ.

ಸದ್ಯ ಜಲಾಶಯದಲ್ಲಿ ಮೀನು ಹಿಡಿಯಲು ಗುತ್ತಿಗೆ ಪಡೆದಿರುವ ಮೀನುಗಾರರು ಮೀನುಗಾರಿಕೆಯಲ್ಲಿ ತೊಡಗಿದ್ದು, ಮೀನುಗಾರರ ಕುಟುಂಬಗಳೂ ಕೆಲವು ದಿನಗಳಿಂದ ಆಣೆಕಟ್ಟೆಯ ಅನತಿ ದೂರದಲ್ಲೇ ಟೆಂಟ್ ಹಾಕಿಕೊಂಡು ಜಲಾಶಯದಲ್ಲೇ ಬೀಡುಬಿಟ್ಟಿವೆ.

ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಹೊಸಪೇಟೆಯ ಜನತೆ ನೀರನ್ನು  ಮಿತವಾಗಿ ಬಳಸುವುವುದಕ್ಕೆ ಆದ್ಯತೆ ನೀಡಬೇಕು ಎಂದು ಅಲ್ಲಿನ ನಗರಸಭೆಯ ಆಯುಕ್ತ ರಂಗಸ್ವಾಮಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.