ADVERTISEMENT

ಬರ ಪಟ್ಟಿಗೆ ಮತ್ತೆ 30 ತಾಲ್ಲೂಕು

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ಬೆಂಗಳೂರು: ರಾಜ್ಯದ ಇನ್ನೂ 30 ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು ಎಂದು ಕಾನೂನು ಸಚಿವ ಟಿ. ಬಿ. ಜಯಚಂದ್ರ ತಿಳಿಸಿದರು.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 98 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹೆಚ್ಚುವರಿಯಾಗಿ ಸೇರಿಸಬೇಕಾದ 30 ತಾಲ್ಲೂಕುಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಈ ತಾಲ್ಲೂಕುಗಳಲ್ಲೂ ಗಂಭೀರವಾಗಿದೆ. ಸುಮಾರು 900 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ ಎಂದರು.

ಬರಪೀಡಿತ ತಾಲ್ಲೂಕುಗಳಲ್ಲಿ ಫ್ಲೋರೈಡ್‌ ಸಮಸ್ಯೆ ತೀವ್ರವಾಗಿದೆ. ಸುಮಾರು 1800 ಗ್ರಾಮಗಳು ಫ್ಲೋರೈಡ್‌ಯುಕ್ತ ನೀರಿನ ಸಮಸ್ಯೆಯಿಂದ ತತ್ತರಿಸಿವೆ. ಪ್ರಮುಖವಾಗಿ ತುಮಕೂರು ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಇದು ಹೆಚ್ಚು. ಮರಳು ಲೂಟಿಯೇ ಇದಕ್ಕೆ ಮೂಲ ಕಾರಣ. ಮರಳು, ನೀರನ್ನು ಹೀರಿಕೊಂಡು ಅಂತರ್ಜಲ ಕಾಪಾಡುತ್ತದೆ. ಆದರೆ, ಅವ್ಯಾಹತವಾಗಿ ಮರಳು ಬಗೆದ ಕಾರಣ ನೀರು ದೊರೆಯುತ್ತಿಲ್ಲ. ಸಿಕ್ಕರೂ ಫ್ಲೋರೈಡ್‌ನಿಂದ ಕೂಡಿರುತ್ತದೆ ಎಂದರು.

ಇಂದು ಸದನ ನಾಯಕರ ಸಭೆ
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ತೀರ್ಪು ಕುರಿತು ಚರ್ಚಿಸಲು ಬುಧವಾರ (ಜ.8) ವಿಧಾನಮಂಡಲದ ಉಭಯ ಸದನಗಳ ನಾಯಕರ ಸಭೆ ಕರೆಯಲಾಗಿದೆ.

‘ಗುರುವಾರ (ಜ.9) ದೆಹಲಿಯಲ್ಲಿ ಮುಖ್ಯಮಂತ್ರಿ, ಜಲ­ಸಂಪ­ನ್ಮೂಲ ಸಚಿವರು ಹಾಗೂ ನಾನು, ಹಿರಿಯ ವಕೀಲ ಫಾಲಿ ನಾರಿಮನ್‌ ಜತೆ ಜಲ ವಿವಾದಗಳ ಕುರಿತು ಸಮಾಲೋಚನೆ ನಡೆಸಲಿದ್ದೇವೆ’.

ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಸಂರಕ್ಷಣೆ ಕುರಿತ ಕಸ್ತೂರಿರಂಗನ್‌   ವರದಿ ಚರ್ಚೆಗೆ ಸಚಿವ ಸಂಪುಟದ ಉಪಸಮಿತಿಯ ಸಭೆ ಇದೇ 9ರಂದು ನಡೆಯಲಿದೆ. ನಂತರ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಮಂಡಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

22ರಿಂದ ಜಂಟಿ ಅಧಿವೇಶನ
ವಿಧಾನಮಂಡಲದ ಜಂಟಿ ಅಧಿವೇಶನ ಇದೇ 22ರಿಂದ 30ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಫೆಬ್ರುವರಿ ಎರಡನೇ ವಾರದಲ್ಲಿ ಬಜೆಟ್‌ ಅಧಿವೇಶನ ನಡೆಸಲಾಗುವುದು.

‘ಗೋಡೆ ಒಡೆಯಲು ನಿರ್ಬಂಧ’
ವಿಧಾನಸೌಧದ ಕಚೇರಿಗಳಲ್ಲಿ ಗೋಡೆ ಒಡೆಯುವುದಕ್ಕೆ ನಿರ್ಬಂಧ ಹೇರಲಾಗುವುದು ಎಂದು ಕಾನೂನು ಸಚಿವ ಟಿ. ಬಿ. ಜಯಚಂದ್ರ ತಿಳಿಸಿದರು.

ADVERTISEMENT

ಸಚಿವ ಎಚ್‌. ಆಂಜನೇಯ ಅವರು ತಮ್ಮ ಕಚೇರಿಯಲ್ಲಿ ಗೋಡೆ ಒಡೆಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿದೆ. ವಿಧಾನಸಭೆ ಸ್ಪೀಕರ್‌ ಹಾಗೂ ವಿಧಾನಪರಿಷತ್‌  ಸಭಾಪತಿ ಹಾಗೂ ಮುಖ್ಯಮಂತ್ರಿ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.