ADVERTISEMENT

ಬರ ಪರಿಹಾರಕ್ಕೆ ಹೆಚ್ಚಿನ ನೆರವು- ಸೋನಿಯಾ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST
ಬರ ಪರಿಹಾರಕ್ಕೆ ಹೆಚ್ಚಿನ ನೆರವು- ಸೋನಿಯಾ
ಬರ ಪರಿಹಾರಕ್ಕೆ ಹೆಚ್ಚಿನ ನೆರವು- ಸೋನಿಯಾ   

ಮಂಗಳೂರು: ರಾಜ್ಯದ ಬರ ಪರಿಸ್ಥಿತಿ, ಅಡಿಕೆಗೆ ಹಳದಿ ರೋಗ, ರೇಷ್ಮೆಗೆ ಒದಗಿದ ಸಂಕಷ್ಟದಂತಹ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿದ್ದು, ರಾಜ್ಯಕ್ಕೆ ಹೆಚ್ಚಿನ ನೆರವು ಸಿಗುವಂತೆ ತಾವು ಕೇಂದ್ರಕ್ಕೆ ಸೂಚನೆ ನೀಡುವುದಾಗಿ   ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಸಂಜೆ ನೆಹರು ಮೈದಾನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭರವಸೆ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ರಾಜ್ಯದ ಇತರ ಸಮಸ್ಯೆಗಳ ಜತೆಗೆ ಕಾವೇರಿ ನದಿ ನೀರಿನ ಬಿಕ್ಕಟ್ಟಿನಲ್ಲಿ ಸೋನಿಯಾ ಅವರು ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ವಿನಂತಿಸಿದರು.

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಹ ಕಾವೇರಿ ವಿಚಾರವನ್ನು ಸೋನಿಯಾ ಅವರ ಗಮನಕ್ಕೆ ತಂದರು. ಆದರೆ ಸೋನಿಯಾ ಅವರು ತಮ್ಮ ಭಾಷಣದಲ್ಲಿ ಕಾವೇರಿ ವಿಷಯ ಪ್ರಸ್ತಾಪಿಸಲಿಲ್ಲ. ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದ ಸಭೆಯಲ್ಲಿ ಭಿನ್ನಮತದ ಬಗ್ಗೆ ಸೊಲ್ಲೆತ್ತಲು ಅವಕಾಶವೇ ಸಿಗಲಿಲ್ಲ. ಏಕೆಂದರೆ ಸಂಜೆ 4.30ಕ್ಕೆ ಬರಬೇಕಿದ್ದ ಸೋನಿಯಾ ಅವರು ವೇದಿಕೆಗೆ ಬಂದಾಗ ಸಂಜೆ 5 ಗಂಟೆಯಾಗಿತ್ತು. ಹೀಗಾಗಿ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಯಿತು. ಸೋನಿಯಾ ಸಮ್ಮುಖದಲ್ಲಿ ಭಾಷಣ ಮಾಡಬೇಕಿದ್ದವರು ಅವರ ಆಗಮನಕ್ಕೆ ಮೊದಲಾಗಿಯೇ ಮಾತನಾಡಬೇಕಾಯಿತು.

ಸೋನಿಯಾ ಅವರು ಬಾಲ ಸೇವಾದಳ ಕಾರ್ಯಕರ್ತರಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಅವರ ಸಮ್ಮುಖದಲ್ಲಿ ಸ್ಮರಣ ಶಕ್ತಿಯಲ್ಲಿ ದಾಖಲೆ ಮಾಡಿರುವ ಬುದ್ಧಿಮಾಂದ್ಯ ಯುವಕ ಸುರೇಶ್ ನಾಯಕ್ ತಮ್ಮ ಜ್ಞಾಪಕ ಶಕ್ತಿ ಪ್ರದರ್ಶಿಸಿದರು. ವಿಜಾಪುರದ ಶಿವನಗೌಡ ಅವರು ಅದ್ಭುತವಾಗಿ ಯೋಗ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.