ADVERTISEMENT

ಬಲವಂತದ ದುಡಿಮೆಗೆ ಕೊನೆಗೂ ಮುಕ್ತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 19:30 IST
Last Updated 9 ಮಾರ್ಚ್ 2012, 19:30 IST

ಮೈಸೂರು: ಬಡ ರೈತಾಪಿ ಕುಟುಂಬದಲ್ಲಿ ಜನನ. ಕಿತ್ತು ತಿನ್ನುವ ಬಡತನ. ತುತ್ತಿನ ಚೀಲ ತುಂಬಿಸಿಕೊಳ್ಳಲು ಗೆಳತಿಯ ಮೊರೆ. ಅದೃಷ್ಟ ಖುಲಾಯಿಸಿತು ಎಂದು ಬೀಗುವಷ್ಟರಲ್ಲೇ ನೆರವಿಗೆ ಬಂದ ಗೆಳತಿಯಿಂದಲೇ ಮೋಸ. ಇದರಿಂದ ದೊರೆತ ಪ್ರತಿಫಲ ಇಸ್ರೇಲ್ ದೇಶದಲ್ಲಿ ಮೂರೂವರೆ ವರ್ಷ `ಬಂಧನ~.

-ಇದು ದೂರದ ಇಸ್ರೇಲ್‌ನಲ್ಲಿ `ಬಲವಂತದ ದುಡಿಮೆ~ಗೆ ಬಲಿಯಾದ ನತದೃಷ್ಟ ಯುವತಿಯ ಕತೆ. ಸದ್ಯ ಬಂಧಮುಕ್ತಳಾಗಿರುವ ಯುವತಿ ತಾಯಿಯ ಮಡಿಲು ಸೇರಿದ್ದಾರೆ. ಏಳು ವರ್ಷಗಳಿಂದ ಹೆತ್ತ ಮಗಳಿಂದ ದೂರವಿದ್ದ ಕುಟುಂಬದ ಸದಸ್ಯರಲ್ಲಿ ಸಂತಸ ಮನೆಮಾಡಿದೆ. ಹೀಗೆ ಸಬೀನಾ ಮನೆ ಸೇರುವಲ್ಲಿ ನಗರದ `ಒಡನಾಡಿ~ ಸೇವಾ ಸಂಸ್ಥೆ ಕಾಳಜಿ ವಹಿಸಿದೆ.

ಏನಿದು ಪ್ರಕರಣ?: ಕಡಲತಡಿಯ ಉಡುಪಿ ಜಿಲ್ಲೆಯ ಬೈಂದೂರು ಗ್ರಾಮದ ಸಬೀನಾ ಡಿಸಿಲ್ವಾ (ಹೆಸರು ಬದಲಾಯಿಸಲಾಗಿದೆ) ಮನೆಯಲ್ಲಿ ಕಾಡುವ ಬಡತನ. ತುತ್ತಿನಚೀಲ ತುಂಬಿಸಲು ಕೆಲಸದ ಹುಡುಕಾಟದಲ್ಲಿದ್ದರು. ಈ ವೇಳೆಯಲ್ಲಿ ನೆರವಿಗೆ ಬಂದವರು ಸ್ನೇಹಿತೆ ಗೀತಾ ಡಿಕಾಸ್ಟ. ಅದಾಗಲೇ ಇಸ್ರೇಲ್ ದೇಶದ ಪೆಟ್ಟೆತಿಕ್ಕಾ ಪಟ್ಟಣದ ಮನಶೇಯಾಸ್ತಿ (ಮೂಲತಃ ಪಾಕಿಸ್ತಾನದವರು) ಅವರ ಮನೆಯಲ್ಲಿ ತಾಯಿಯ ಶುಶ್ರೂಷೆ ಮಾಡಿಕೊಂಡಿದ್ದ ಗೀತಾ ಮರಳಿ ಭಾರತಕ್ಕೆ ಬರಲು ಇಚ್ಛಿಸಿದರು. ಮನೆಯ ಮಾಲೀಕನ ಬಳಿ ಈ ಕುರಿತು ಹೇಳಿದಾಗ ಆತ ಸ್ಪಷ್ಟವಾಗಿ ನಿರಾಕರಿಸಿ, ಕೊನೆಯವರೆಗೂ ತಾಯಿಯ ಸೇವೆ ಮಾಡಿಕೊಂಡು ಇಲ್ಲಿಯೇ ಇರಬೇಕು ಎಂದು ಸೂಚಿಸಿದನು. ಅಷ್ಟೇ ಅಲ್ಲ ಗೀತಾ ಅವರ ಪಾಸ್‌ಪೋರ್ಟ್ ಕಿತ್ತುಕೊಂಡನು.

ಇದರಿಂದ ನೊಂದ ಗೀತಾ ಹೇಗಾದರೂ ಮಾಡಿ ತವರು ಸೇರಲು ಮುಂದಾದರು. `ತನ್ನ ಬದಲು ಬೇರೆ ಯಾರನ್ನಾದರೂ ಕೆಲಸಕ್ಕೆ ಕರೆತಂದರೆ ತಾನು ಭಾರತಕ್ಕೆ ಮರಳಬಹುದಾ?~ ಎಂದು ಮನಶೇಯಾಸ್ತಿಯನ್ನು ಪ್ರಶ್ನಿಸಿದರು. ಇದಕ್ಕೆ ಆತ ಒಪ್ಪಿಗೆ ಸೂಚಿಸಿದ. ಆಗ ಗೀತಾ ಅವರಿಗೆ ಕಂಡಿದ್ದು ಸಬೀನಾ, ತಡಮಾಡದೇ ಉಡುಪಿಗೆ ಬಂದ ಅವರು ಸಬೀನಾರ ಮನವೊಲಿಸಿ, ಹೆಚ್ಚಿನ ಸಂಬಳದ ಆಮಿಷವೊಡ್ಡಿ ಪಾಸ್‌ಪೋರ್ಟ್, ವೀಸಾ ತಾವೇ ಮಾಡಿಸಿ ಇಸ್ರೇಲ್‌ಗೆ ಕಳುಹಿಸಿದರು.

ಇಸ್ರೇಲ್‌ನಲ್ಲಿ ಸಬೀನಾ ಕೆಲಸಕ್ಕೆ ಹೊಂದಿಕೊಂಡರಾದರೂ ಕೆಲಸ ಮುಂದುವರಿಸಲು ಆಗಲಿಲ್ಲ. ಈ ಕುರಿತು ಮನೆಯ ಮಾಲೀಕರಿಗೆ ತಿಳಿಸಿದಾಗ ಆತ ಮುಂಚಿನಂತೆಯೇ ಸಬೀನಾರ ಪಾಸ್‌ಪೋರ್ಟ್ ಅನ್ನೂ ಕಿತ್ತುಕೊಂಡ. ನಂತರ ಒಂದು ದಿನ ಪಾಸ್‌ಪೋರ್ಟ್ ಇಲ್ಲದ ಸಬೀನಾ ಇಸ್ರೇಲ್ ಪೊಲೀಸರಿಗೆ ಸಿಕ್ಕಿಬಿದ್ದರು. ಮನೆಯ ಮಾಲೀಕ ಪಾಸ್‌ಪೋರ್ಟ್ ಕಸಿದುಕೊಂಡಿರುವ ವಿಷಯವನ್ನು ಸಬೀನಾ ಪೊಲೀಸರಿಗೆ ತಿಳಿಸಿದರು.
ಆಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಬೀನಾರನ್ನು ಮೂರು ವರ್ಷ ಇಸ್ರೇಲ್‌ನ ಮಹಿಳಾ ವೀಕ್ಷಣಾಲಯದಲ್ಲಿ ಇಟ್ಟರು. ಆರೋಪಿ ಮನಶೇಯಾಸ್ತಿಯನ್ನು ಬಂಧಿಸಿದರು.

ಇದೀಗ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು ಮನಶೇಯಾಸ್ತಿಗೆ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿ, ಆತನ ಆಸ್ತಿಯನ್ನು ಇಸ್ರೇಲ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಆತನಿಂದ ಸಬೀನಾರಿಗೆ ಬರಬೇಕಾಗಿದ್ದ 21 ಲಕ್ಷ ರೂಪಾಯಿಗಳನ್ನು ಅವರಿಗೆ ನೀಡಿ `ಒಡನಾಡಿ~ ಸಂಸ್ಥೆಗೆ ಹಸ್ತಾಂತರಿಸಿದೆ.

`ಮನಶೇಯಾಸ್ತಿಯ ತಾಯಿಯ ಆರೈಕೆ ಜೊತೆಗೆ ಮನೆಗೆಲಸವನ್ನೂ ಮಾಡಬೇಕಿತ್ತು. ಅಲ್ಲದೆ ಅವರ ಕಚೇರಿ ಕೆಲಸಗಳನ್ನೂ ಮಾಡಿಸುತ್ತಿದ್ದರು. ಸಂಬಳ ಮಾತ್ರ ಕೊಡುತ್ತಿರಲಿಲ್ಲ. ಅವರು ಕೊಟ್ಟದ್ದೇ ಊಟ, ಇಲ್ಲವಾದರೆ ಇಲ್ಲ. ಇದರಿಂದ ಎಷ್ಟೋ ಸಾರಿ ಕುಸಿದು ಬಿದ್ದಿದ್ದೇನೆ. ನಿರಂತರ ಕೆಲಸದಿಂದ ಮಾನಸಿಕವಾಗಿ ನೊಂದು ಹೋಗಿದ್ದೆ. ಇದರಿಂದ ಬೇಸತ್ತು, ಹೇಗಾದರೂ ಮಾಡಿ ಊರು ಸೇರಬೇಕು ಎಂದು ಯೋಚಿಸಿದ್ದೆ~ ಎಂದು ಸಬೀನಾ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಒಡನಾಡಿ ಸಂಸ್ಥೆಯ ಪರಶು, `ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನವ ಸಾಗಣೆ ವ್ಯಾಪಕವಾಗಿ ನಡೆಯುತ್ತಿದೆ. ಈ ಯುವತಿಯ ಬಗ್ಗೆ ಇಸ್ರೇಲ್ ಸರ್ಕಾರ ನಮ್ಮಂದಿಗೆ ಸಂಪರ್ಕಿಸಿ, ಅವರನ್ನು ಮನೆ ಸೇರಿಸುವಂತೆ ಕೋರಿದರು. ಅದರಂತೆ ಸಬೀನಾರ ಖಾತೆಗೆ ರೂ. 21 ಲಕ್ಷ ಹಣವನ್ನು ಪಾವತಿಸಲಾಗಿದೆ. ಅವರ ಸಹೋದರರು ಶುಕ್ರವಾರ ಸಬೀನಾರನ್ನು ಮನೆಗೆ ಕರೆದೊಯ್ದರು~ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.