ADVERTISEMENT

ಬಲೆಗೆ ಬಿದ್ದ ಗರಗಸ ಮೀನು

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST
ಬಲೆಗೆ ಬಿದ್ದ ಗರಗಸ ಮೀನು
ಬಲೆಗೆ ಬಿದ್ದ ಗರಗಸ ಮೀನು   

ಕಾರವಾರ: ಸಾಗರದಾಳದಲ್ಲಿ ಅದೆಷ್ಟು ಜೀವವೈವಿಧ್ಯ ಅಡಗಿದೆಯೋ ಗೊತ್ತಿಲ್ಲ. ಸೋಮವಾರ ಮೀನುಗಾರರ ಬಲೆಗೆ ಬಿದ್ದ ‘ಸ್ಮಾಲ್ ಟಿತ್ ಸಾ ಫಿಶ್ (ಸಣ್ಣ ಹಲ್ಲಿನ ಗರಗಸ ಮೀನು)’ ಇದಕ್ಕೆ ಉತ್ತಮ ನಿದರ್ಶನ. ಗರಗಸದಂತಹ ಬಾಯಿ ಹೊಂದಿರುವ ಗಜಗಾತ್ರದ ಮೀನು ಸಿಕ್ಕಿದ್ದು ತಾಲ್ಲೂಕಿನ ಮಾಜಾಳಿ ಗ್ರಾ.ಪಂ. ವ್ಯಾಪ್ತಿಯ ದಾಂಡೇಭಾಗ್‌ನ ಸಾಂಪ್ರದಾಯಿಕ ಮೀನುಗಾರಿಕಾ ಬಲೆಗೆ.

ಅಳಿವಿನಂಚಿನಲ್ಲಿರುವ ಸಾಗರದ ಜೀವಿಗಳ ಪಟ್ಟಿಗೆ ಸೇರಿರುವ ಈ ಮೀನಿನ ವೈಜ್ಞಾನಿಕ ಹೆಸರು ಪ್ರಿಸ್ಟಿಸ್. ಪ್ರಿಸ್ಟಿಸ್‌ಡೆ ಪ್ರಬೇಧಕ್ಕೆ ಇದು ಸೇರಿದೆ. ಮೀನುಗಾರರು ಇದಕ್ಕೆ ಗರಗಸ ಮೀನು, ಸಿಂಗಸಿಪಟ್ಟಿ, ಈಸ್ ಮೀನು ಎನ್ನುತ್ತಾರೆ. ಸಾಂಪ್ರದಾಯಿಕ ಮೀನುಗಾರಿಕಾ ಬಲೆಗೆ ಬಿದ್ದ ಈ ಮೀನು 17 ಅಡಿ ಉದ್ದವಿದೆ. ಗರಗಸದಂತಿರುವ ಇದರ ಚುಂಚಿನ ಉದ್ದ ಬರೊಬ್ಬರಿ 3.50 ಅಡಿ ಇದೆ. ಆರು ಅಡಿ ಸುತ್ತಳತೆ ಹೊಂದಿರುವ ಈ ಮೀನು ಅಂದಾಜು 500 ಕೆ.ಜಿ. ಭಾರ ಇದೆ.

 ಈ ಮೀನಿನ ಹಣೆಯ ಮೇಲೆ ನಾಮ ಇರುವ ಗುರುತು ಕಂಡುಬಂದರೆ ಅದು ‘ದೇವರ ಮೀನು’ ಎನ್ನುವ ನಂಬಿಕೆ ಮೀನುಗಾರರಲ್ಲಿದೆ. ಗರಗಸ ಮೀನಿನ ಹಣೆಯ ಮೇಲೆ ನಾಮದ ಗುರುತು ಕಂಡುಬಂದರೆ ಮೀನುಗಾರರ ಅದನ್ನು ಮರಳಿ ಸಮುದ್ರಕ್ಕೆ ಬಿಟ್ಟು ‘ತಮ್ಮ ವೃತ್ತಿಯಲ್ಲಿ ಯಾವುದೇ ತೊಂದರೆ ಆಗದಿರಲಿ’ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತಾರೆ.

‘ಗರಗಸದಂತಹ ಚುಂಚಿನಲ್ಲಿರುವ ಹಲ್ಲಿನ ಸಹಾಯದಿಂದ ಇದು ಬೇರೆ ಮೀನುಗಳನ್ನು ಭೇಟೆಯಾಡುತ್ತದೆ. ಇದರ ಚರ್ಮ ಹಾಗೂ ರೆಕ್ಕೆಗಳಿಂದ ಸೂಪ್ ತಯಾರು ಮಾಡುವುದರಿಂದ ಇದಕ್ಕೆ ವಿದೇಶಕ್ಕೆ ಹೆಚ್ಚಿನ ಬೇಡಿಕೆ ಇದೆ. ಸಮಶೀತೋಷ್ಣ ವಲಯದಲ್ಲಿ ಗರಗಸ ಮೀನುಗಳು ಹೆಚ್ಚಾಗಿ ಕಂಡುಬರುತ್ತವೆ’ ಎನ್ನುತ್ತಾರೆ ಕವಿವಿ ಸಾಗರ ಅಧ್ಯಯನ ಕೇಂದ್ರದ ಪ್ರೊ . ವಿ.ಎನ್.ನಾಯಕ.

ದಾಂಡೇಭಾಗ್‌ನ ದಿನೇಶ ಸೈಲ್, ಪ್ರಶಾಂತ, ಸುನೀಲ್ ಬೊಳೇಕರ್ ಹಾಗೂ ದತ್ತಾತ್ರೇಯ ಎಂಬ ಮೀನುಗಾರರು ಹರಸಾಹಸ ಮಾಡಿ ಇದನ್ನು ತಂದಿದ್ದಾರೆ.ಕೇರಳದ ಮೀನುಗಾರರು ರೂ. 45 ಸಾವಿರಕ್ಕೆ ಈ ಮೀನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.