ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಶರಣಾಗಿರುವ ಪ್ರಮುಖ ಆರೋಪಿ, ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರ ಆಪ್ತ ಮೆಹಫೂಜ್‌ಅಲಿ ಖಾನ್ ಅವರನ್ನು ಮಂಗಳವಾರ ರಾತ್ರಿ ವಿಚಾರಣೆಗಾಗಿ ನಗರಕ್ಕೆ ಕರೆತರಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮೂಲಕ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ವಿಚಾರಣೆಗಾಗಿ ಹೈದರಾಬಾದ್‌ನ ಚಂಚಲಗುಡ ಕಾರಾಗೃಹದಲ್ಲಿದ್ದ ಜಿ.ಜನಾರ್ದನ ರೆಡ್ಡಿ ಅವರನ್ನು ಬೆಂಗಳೂರಿಗೆ ಕರೆತಂದ ಸಂದರ್ಭ ಖಾನ್ ಸಿಬಿಐ ಎದುರು ಶರಣಾಗಿದ್ದ.
ಜಿಲ್ಲೆಯ ಸಂಡೂರು ತಾಲ್ಲೂಕಿನ ರಾಮಗಡ ಅರಣ್ಯ ಪ್ರದೇಶ ಹಾಗೂ ಸುಲ್ತಾನ್‌ಪುರ ಬಳಿಯ ಸ್ಟಾಕ್ ಯಾರ್ಡ್‌ಗಳಿಗೆ ಬುಧವಾರ ಬೆಳಿಗ್ಗೆ ಅಲಿಖಾನ್‌ನನ್ನು ಕರೆದೊಯ್ದು ಅಗತ್ಯ ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ.
ಬಿಗಿ ಬಂದೋಬಸ್ತ್: ಸಿಬಿಐ ಸಿಬ್ಬಂದಿಯು ಖಾನ್ ಅವರನ್ನು ನಗರಕ್ಕೆ ಕರೆತಂದಿರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ ಕ್ಯಾತನ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.