ADVERTISEMENT

ಬಳ್ಳಾರಿ ಉಪ ಚುನಾವಣೆ: ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2011, 4:30 IST
Last Updated 30 ನವೆಂಬರ್ 2011, 4:30 IST
ಬಳ್ಳಾರಿ ಉಪ ಚುನಾವಣೆ: ಶಾಂತಿಯುತ ಮತದಾನ
ಬಳ್ಳಾರಿ ಉಪ ಚುನಾವಣೆ: ಶಾಂತಿಯುತ ಮತದಾನ   

ಬಳ್ಳಾರಿ: ಭಾರಿ ಕುತೂಹಲ ಕೆರಳಿಸಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾನ ಬುಧವಾರ ಶಾಂತಿಯುತವಾಗಿ ಪ್ರಾರಂಭವಾಗಿದ್ದು, ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳತ್ತ ಧಾವಿಸಿ ಮತಚಲಾಯಿಸಲು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬರುತ್ತಿದೆ.

ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಎಲ್ಲೇಡೆ ಭಾರಿ ಪ್ರಮಾಣದ ಭದ್ರತಾ ವ್ಯವಸ್ಥೆ ಕೈಗೊಂಡಿರುವುದರಿಂದ ಮತದಾನ ಶಾಂತಿಯುತವಾಗಿ ನಡೆದಿದ್ದು, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಶೇ.20 ರಷ್ಟು ಮತದಾನವಾಗಿದೆ.

ಪ್ರಮುಖವಾಗಿ ಚುನಾವಣಾ ಕಣದಲ್ಲಿರುವ  ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಬಿ.ಶ್ರೀರಾಮುಲು ಸೇರಿದಂತೆ ಎಂಟು ಅಭ್ಯರ್ಥಿಗಳ ಭವಿಷ್ಯವನ್ನು 1.72 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ.

ಒಟ್ಟು 195 ಮತಗಟ್ಟೆಗಳ ಪೈಕಿ 133 ಅತಿ ಸೂಕ್ಷ್ಮ, 52 ಸೂಕ್ಷ್ಮ, 10 ಸಾಮಾನ್ಯ ಮತಗಟ್ಟೆಗಳಿವೆ. ಬಹುತೇಕ ಕಡೆಗಳಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಿಗೂ ಅತಿ ಸೂಕ್ಷ್ಮ ಮತೆಗಟ್ಟೆಗಳಿಗೆ ಒದಗಿಸುವ ಭದ್ರತೆಯನ್ನೇ ಒದಗಿಸಲಾಗಿದೆ.

ನಗರದಲ್ಲಿ ಒಟ್ಟು 76 ಮತಗಟ್ಟೆಗಳಲ್ಲಿ ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿ 67 ಸಾವಿರ, ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ಮತದಾರರಿದ್ದಾರೆ.

ಇದೇ ಮೊದಲ ಬಾರಿಗೆ ನಗರದ ಕೌಲ್‌ಬಝಾರ್‌ನ ಮೋರ್‌ಗಲ್ಲಿಯ ಸರ್ಕಾರಿ ಶಾಲೆ ಹಾಗೂ ಮತ್ತಿತರ ಕಡೆಗಳಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಗಳಲ್ಲಿ ಕಟಕಟೆ ನಿರ್ಮಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ಶಸ್ತ್ರಸಜ್ಜಿತ ಸಿಬ್ಬಂದಿ ಕಟ್ಟೆಚ್ಚರದಿಂದ ಕಾವಲು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT