ADVERTISEMENT

ಬಳ್ಳಾರಿ; ಮೇಯರ್, ಉಪಮೇಯರ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2012, 19:30 IST
Last Updated 16 ಮಾರ್ಚ್ 2012, 19:30 IST

ಬಳ್ಳಾರಿ: ಸ್ಥಳೀಯ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕೆ.ಹನುಮಂತಪ್ಪ, ಉಪಮೇಯರ್ ಆಗಿ ಇಬ್ರಾಹಿಂ ಬಾಬು ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗ್ದ್ದಿದು, ಇವರನ್ನೂ ಒಳಗೊಂಡಂತೆ ಬಿಜೆಪಿಯಿಂದ ಆಯ್ಕೆಯಾಗಿರುವ ಪಾಲಿಕೆಯ ಇತರ 26 ಸದಸ್ಯರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಹಿಂದುಳಿದ `ಎ~ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಕೆ.ಹನುಮಂತಪ್ಪ ಮತ್ತು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪ ಮೇಯರ್ ಸ್ಥಾನಕ್ಕೆ ಇಬ್ರಾಹಿಂ ಬಾಬು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ಸದಸ್ಯರು ನಾಮಪತ್ರ ಸಲ್ಲಿಸದೇ ಇದ್ದುದರಿಂದ ಇವರಿಬ್ಬರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಗುಲ್ಬರ್ಗ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೆ.ರತ್ನಪ್ರಭಾ ಘೋಷಿಸಿದರು.

2007ರ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳ ಪೈಕಿ ಬಿಜೆಪಿಯಿಂದ 30, ಜೆಡಿಎಸ್‌ನಿಂದ ಮೂವರು, ಬಿಎಸ್‌ಪಿಯ ಇಬ್ಬರು ಆಯ್ಕೆಯಾಗಿದ್ದಾರೆ.

ರಾಜೀನಾಮೆ: ಶುಕ್ರವಾರ ನಡೆದ ಐದನೇ ಮತ್ತು ಕೊನೆಯ ಅವಧಿಯ ಮೇಯರ್, ಉಪ ಮೇಯರ್ ಸ್ಥಾನದ ಚುನಾವಣೆಯ ನಂತರ, ಬಿಜೆಪಿಯಿಂದ ಗೆಲುವು ಸಾಧಿಸಿದ್ದ 30 ಸದಸ್ಯರ ಪೈಕಿ ಸಂಜಯ್ ಮತ್ತು ಪಾರ್ವತಿ ಇಂದುಶೇಖರ್ ಅವರನ್ನು ಹೊರತುಪಡಿಸಿ, ಉಳಿದ 28 ಜನ ಸದಸ್ಯರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾಗಿ ಘೋಷಿಸಿದರು.

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ಈ ಕುರಿತು ಪತ್ರ ಬರೆದು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಾಗಿದ್ದು, ಶಾಸಕ ಶ್ರೀರಾಮುಲು ಅವರು ಸ್ಥಾಪಿಸಲಿರುವ ನೂತನ ಪಕ್ಷ ಸೇರುವುದಾಗಿ ಅವರು ಪ್ರಕಟಿಸಿದರು.

ನೂತನ ಮೇಯರ್ ಕೆ.ಹನುಮಂತಪ್ಪ ಕೇವಲ ಮೂರು ತಿಂಗಳ ಅವಧಿಗೆ ಮಾತ್ರ ಆ ಸ್ಥಾನದಲ್ಲಿರುತ್ತಾರೆ. ನಂತರ ಇಬ್ರಾಹಿಂ ಬಾಬು ಅವರಿಗೆ ಸ್ಥಾನ ಬಿಟ್ಟುಕೊಡುತ್ತಾರೆ. ನಂತರ ಉಪ ಮೇಯರ್ ಆಗಿ ಗೋವಿಂದರಾಜುಲು ಅವರನ್ನು ಆಯ್ಕೆ ಮಾಡಲು ನಗರದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಶ್ರೀರಾಮುಲು ಹಾಗೂ ಜಿ.ಸೋಮಶೇಖರ ರೆಡ್ಡಿ ತೀರ್ಮಾನಿಸಿದ್ದಾರೆ ಎಂದು ಶ್ರೀರಾಮುಲು ಆಪ್ತ ವಲಯದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.