ADVERTISEMENT

ಬಸವಸಾಗರ: ನಿರ್ವಹಣೆ ಕೊರತೆ; ನೀರು ಪೋಲು

ಚಿದಂಬರ ಪ್ರಸಾದ್
Published 2 ಮೇ 2012, 19:30 IST
Last Updated 2 ಮೇ 2012, 19:30 IST
ಬಸವಸಾಗರ: ನಿರ್ವಹಣೆ ಕೊರತೆ; ನೀರು ಪೋಲು
ಬಸವಸಾಗರ: ನಿರ್ವಹಣೆ ಕೊರತೆ; ನೀರು ಪೋಲು   

ಯಾದಗಿರಿ: ಸುಮಾರು 10 ಲಕ್ಷ ಎಕರೆಗಿಂತ ಹೆಚ್ಚು ಜಮೀನಿಗೆ ನೀರುಣಿಸುತ್ತಿರುವ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ನಿರ್ವಹಣೆಯ ಕೊರತೆಯಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ನಿತ್ಯ ಕಾಲುವೆಗೆ ಹರಿಸುವ 10 ಸಾವಿರ ಕ್ಯೂಸೆಕ್ ನೀರಿನಲ್ಲಿ 6 ಸಾವಿರ ಕ್ಯೂಸೆಕ್ ನೀರು ಮಾತ್ರ ಜಮೀನುಗಳಿಗೆ ಸಿಗುತ್ತಿದೆ!

78 ಕಿ.ಮೀ. ಉದ್ದವಿರುವ ನಾರಾಯಣಪುರ ಎಡದಂಡೆ ಕಾಲುವೆ ಹಾಗೂ ಬಲದಂಡೆ ಕಾಲುವೆಗಳು ಸಂಪೂರ್ಣ ಶಿಥಿಲವಾಗಿವೆ. ಗೇಟ್‌ಗಳು ಕಿತ್ತು ಹೋಗಿದ್ದು, ನೀರು ಪೋಲಾಗುತ್ತಿದೆ. ಮೇಲ್ಭಾಗದ ರೈತರಿಗೆ ಮಾತ್ರ ನೀರು ದೊರೆಯುತ್ತಿದೆ. ಕೊನೆಯ ಭಾಗದ ರೈತರು ನೀರಿಗಾಗಿ ಪರಿತಪಿಸುವಂತಾಗಿದೆ.
ಬಸವಸಾಗರ ಜಲಾಶಯದಿಂದ ಜಿಲ್ಲೆಯ ಬಹುತೇಕ ಪ್ರದೇಶ ನೀರಾವರಿ ಸೌಲಭ್ಯ ಪಡೆದಿದೆ.

ಜೊತೆಗೆ ರಾಯಚೂರು, ಗುಲ್ಬರ್ಗ, ವಿಜಾಪುರ ಜಿಲ್ಲೆಗಳ ಜಮೀನುಗಳಿಗೆ ನೀರು ಹರಿಸುತ್ತಿದೆ. 1982ರಲ್ಲಿ ನಿರ್ಮಾಣವಾದ ಬಸವಸಾಗರ ಜಲಾಶಯವು 492.5 ಮೀಟರ್ ಎತ್ತರವಿದ್ದು, 37.60 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ.

ಬಸವಸಾಗರ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹಿಸುವುದಿಲ್ಲ. ಮೇಲ್ಭಾಗದಲ್ಲಿರುವ ಆಲಮಟ್ಟಿ ಜಲಾಶಯದಲ್ಲಿಯೇ ನೀರು ಸಂಗ್ರಹಣೆ. ಅಗತ್ಯಕ್ಕೆ ಅನುಸಾರವಾಗಿ ಆಲಮಟ್ಟಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ ನೀರು ಬಿಡಲಾಗುತ್ತಿದೆ. ಸಂಗ್ರಹವಾಗುವ ನೀರನ್ನು ಕಾಲುವೆಗಳ ಮೂಲಕ ಹೊಲಗಳಿಗೆ ಹರಿಸಲಾಗುತ್ತದೆ.

ನಿರ್ವಹಣೆಯೇ ಇಲ್ಲ: `ನೀರಾವರಿಗಾಗಿಯೇ ಬಸವಸಾಗರ ಜಲಾಶಯವನ್ನು ನಿರ್ಮಿಸಲಾಗಿದೆ. ಆದರೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಎಲ್ಲೆಡೆಯೂ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಶಾಖಾ ಕಾಲುವೆ, ವಿತರಣಾ ಕಾಲುವೆಗಳಿಗೆ ಅಳವಡಿಸಿರುವ ಗೇಟ್‌ಗಳೂ ಕಿತ್ತು ಹೋಗಿವೆ.
 
ಗೇಟ್‌ಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದರಿಂದ ಅಗತ್ಯ ಇಲ್ಲದಿದ್ದರೂ ಹೊಲಗಳಿಗೆ ನೀರು ಹರಿಯುತ್ತಲೇ ಇರುತ್ತದೆ. ಹೀಗಾಗಿ ಕೆಲವೆಡೆ ಹೊಲಗಳಿಗೆ ಜವಳು ಹಿಡಿದ ಉದಾಹರಣೆಗಳೂ ಇವೆ~ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟ್ ಹೇಳುತ್ತಾರೆ.

ಈ ಭಾಗದ ನೀರಾವರಿ ತಜ್ಞ ಭಾಸ್ಕರರಾವ ಮೂಡಬೂಳರ ಪ್ರಕಾರ, ಬಸವಸಾಗರ ಜಲಾಶಯದಲ್ಲಿ ಹೂಳಿಗಿಂತ ನಿರ್ವಹಣೆಯ ಸಮಸ್ಯೆಯೇ ದೊಡ್ಡದಾಗಿದೆ. ಕಾಲುವೆ ಶಿಥಿಲವಾಗಿದೆ. ಕಾಲುವೆಯುದ್ದಕ್ಕೂ ಅಳವಡಿಸಿರುವ ಗೇಟ್‌ಗಳ ನಿರ್ವಹಣೆಯನ್ನು ಕೆಬಿಜೆಎನ್‌ಎಲ್ ಅಧಿಕಾರಿಗಳು ಸರಿಯಾಗಿ ಮಾಡುತ್ತಿಲ್ಲ.

ಜೊತೆಗೆ ಪ್ರತಿ ವರ್ಷ ಕಾಲುವೆಯ ತಾತ್ಕಾಲಿಕ ದುರಸ್ತಿಯ ನೆಪದಲ್ಲಿ ರೂ.10-15 ಕೋಟಿ ವೆಚ್ಚ ಮಾಡುತ್ತಿದ್ದು, ಅದೆಲ್ಲವೂ ವ್ಯರ್ಥವಾಗಿದೆ. ರೂ.200 ಕೋಟಿ ವೆಚ್ಚದಲ್ಲಿ ಇದೀಗ ಕಾಲುವೆ ನವೀಕರಣ ಕಾಮಗಾರಿ ಆರಂಭವಾಗಿದೆ. ನಂತರವಾದರೂ ಈ ಸಮಸ್ಯೆ ಬಗೆಹರಿಯಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹೇಳುತ್ತಾರೆ.

ಶೇ. 40 ರಷ್ಟು ಮಾತ್ರ ನೀರು ಉಪಯೋಗವಾಗುತ್ತಿದ್ದು, ಉಳಿದ ಶೇ. 60ರಷ್ಟು ನೀರು ವ್ಯರ್ಥವಾಗಿ ಹೋಗುತ್ತಿದೆ. ಇದೆಲ್ಲವನ್ನೂ ನಿವಾರಣೆ ಮಾಡಬೇಕಾದರೆ, ಸಮರ್ಪಕ ನಿರ್ವಹಣೆ ಆಗಬೇಕು ಎಂದು ಅಭಿಪ್ರಾಯಪಡುತ್ತಾರೆ.

ಶೇ. 5-7ರಷ್ಟು ಹೂಳು:
ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಹೂಳಿನ ತೊಂದರೆ ಅಷ್ಟಾಗಿಲ್ಲ. ಕೇವಲ ಶೇ. 5-7 ರಷ್ಟು ಮಾತ್ರ ಹೂಳು ತುಂಬಿದೆ. ಜಲಾಶಯದ ಹಿನ್ನೀರು ನಿಲ್ಲುವ ಸ್ಥಳದಲ್ಲಿ ಹೂಳಿಲ್ಲ. ಕ್ರೆಸ್ಟ್ ಗೇಟ್‌ಗಳ ಬಳಿ ಮಾತ್ರ ಸ್ವಲ್ಪ ಹೂಳಿದ್ದು, ಅದೂ ಕೂಡ ನೀರಿನ ಜೊತೆ ಹರಿದು ಹೋಗುತ್ತಿದೆ ಎನ್ನುವುದು ನಾರಾಯಣಪುರ ಜಲಾಶಯದ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್ ಸಜ್ಜನರ ಹೇಳುವ ಮಾತು.

1982 ರಿಂದ ಇಲ್ಲಿಯವರೆಗೂ ಹೂಳು ತೆಗೆದಿಲ್ಲ. ಅಂತಹ ಅವಶ್ಯಕತೆಯೂ ಬಂದಿಲ್ಲ. ನೀರು ಸಂಗ್ರಹಣೆ ಹಾಗೂ ನೀರಾವರಿ ಎರಡೂ ಸೌಲಭ್ಯಕ್ಕಾಗಿ ತುಂಗಭದ್ರಾ ಜಲಾಶಯವನ್ನು ನಿರ್ಮಿಸಲಾಗಿದೆ. ಅಲ್ಲಿ ಹೂಳಿನ ಸಮಸ್ಯೆ ತೀವ್ರವಾಗಿದೆ. ಆದರೆ ಬಸವಸಾಗರ ಜಲಾಶಯದ ಸ್ಥಿತಿಯೇ ಬೇರೆ. ಇಲ್ಲಿ ಅಗತ್ಯವಿರುವಷ್ಟು ನೀರನ್ನು ಸಂಗ್ರಹಿಸಿ ಕಾಲುವೆಗಳಿಗೆ ಹರಿಸಲಾಗುತ್ತದೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಹಿರಿಯ ಅಧಿಕಾರಿ ಹಳ್ಳೂರ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.