ಬೆಂಗಳೂರು (ಪಿಟಿಐ): ಕರ್ನಾಟಕ ವಿಧಾನಸಭೆಗೆ ಮೇ 5ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಗಳಿಸುವ ನಿಟ್ಟಿನಲ್ಲಿ ಹೋರಾಡುತ್ತಿದ್ದರೆ, ಜನತಾದಳ (ಎಸ್) ಬಿಜೆಪಿಯನ್ನು ಹಿಂದೆ ಹಾಕಿ ಎರಡನೇ ಸ್ಥಾನ ಪಡೆಯುವ ಕಡೆಗೆ ಸಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಾರಕ ಹೊಡೆತದ ಪರಿಣಾಮವಾಗಿ ಆಡಳಿತಾರೂಢ ಬಿಜೆಪಿ ನೆಲಕಚ್ಚುವುದರೊಂದಿಗೆ ಮೂರನೇ ಸ್ಥಾನಕ್ಕೆ ಇಳಿದಿದೆ.
223 ವಿಧಾನಸಭಾ ಕ್ಷೇತ್ರಗಳ ಪೈಕಿ ಇದುವರೆಗಿನ ಫಲಿತಾಂಶದಂತೆ ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದು, 94 ರಲ್ಲಿ ಮುನ್ನಡೆಯಲ್ಲಿದೆ. ಜನತಾದಳ (ಎಸ್) 14 ಸ್ಥಾನ ಗೆದ್ದು 31ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯು 11 ಸ್ಥಾನಗಳನ್ನು ಗೆದ್ದು 35 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಿ.ಎಸ್. ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷವು (ಕೆಜೆಪಿ) 2ರಲ್ಲಿ ಗೆದ್ದು, 8ರಲ್ಲಿ ಮುನ್ನಡೆಯಲ್ಲಿದೆ. ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ 2 ಸ್ಥಾನ ಗೆದ್ದು ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಇತರರು 2 ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, 14 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.
224 ಸದಸ್ಯಬಲದ ಸದನದಲ್ಲಿ ಬಹುಮತ ಪಡೆಯಲು 113 ಸ್ಥಾನಗಳು ಬೇಕಾಗಿದ್ದು, ಕಾಂಗ್ರೆಸ್ ಸರಳ ಬಹುಮತ ಗಳಿಕೆಯಲ್ಲಿ ವಿಫಲವಾದರೆ ಮುನ್ನಡೆಯಲ್ಲಿರುವ ಪಕ್ಷೇತರರು ಸರ್ಕಾರ ರಚನೆಯಲ್ಲಿ ಪ್ರಮುಖ ಸಾಧ್ಯತೆ ವಹಿಸುವುದು ನಿಚ್ಚಳವಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ನಿಧನದ ಕಾರಣ ಚುನಾವಣೆ ಮೇ 28ಕ್ಕೆ ಮುಂದೂಡಿಕೆಯಾಗಿದೆ.
ಸಾಕಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಮತಗಳನ್ನು ಬುಟ್ಟಿಗೆ ಹಾಕಿಕೊಂಡ ಕೆಜೆಪಿಯು ಬಿಜೆಪಿಯು ಭಾರಿ ಸೋಲು ಉಣ್ಣುವಂತೆ ಮಾಡಿದೆ. ಬಿಜೆಪಿಯ ಪ್ರಬಲ ನೆಲೆಯೆಂದೇ ಪರಿಗಣಿತವಾಗಿರುವ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಭಾರಿ ಜಯಗಳಿಕೆಯತ್ತ ದಾಪುಗಾಲು ಇಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.