ADVERTISEMENT

ಬಾದಾಮಿ ಸ್ಪರ್ಧೆಗೆ ಚಿಮ್ಮನಕಟ್ಟಿ ಪಟ್ಟು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 20:17 IST
Last Updated 11 ಏಪ್ರಿಲ್ 2018, 20:17 IST

ನವದೆಹಲಿ: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರವಲ್ಲದೆ, ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಟಿಕೆಟ್‌ ಬಯಸಿದ್ದರೆ, ಬಾದಾಮಿಯ ಹಾಲಿ ಶಾಸಕ, ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅದೇ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಬಯಸಿ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ಬುಧವಾರ ತಮ್ಮ ಬೆಂಬಲಿಗರೊಂದಿಗೆ ರಾಷ್ಟ್ರ ರಾಜಧಾನಿಗೆ ದೌಡಾಯಿಸಿರುವ ಚಿಮ್ಮನಕಟ್ಟಿ ಅವರು ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ
ಖರ್ಗೆ ಅವರ ನಿವಾಸಕ್ಕೆ ತೆರಳಿ, ‘ಬಾದಾಮಿ ಕ್ಷೇತ್ರದ ಟಿಕೆಟ್‌ ನನಗೇ ಬೇಕು’ ಎಂದು ಪಟ್ಟು ಹಿಡಿದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ನಾನು ಕ್ಷೇತ್ರದ ಹಾಲಿ ಶಾಸಕ. ಕಳೆದ ಬಾರಿ ಗೆದ್ದರೂ ಸಚಿವ ಸ್ಥಾನ ನಿರಾಕರಿಸಲಾಯಿತು. ದಶಕಗಳಿಂದ ಪಕ್ಷವನ್ನು ಸಂಘಟಿಸಿ, ಬೆಳೆಸಿರುವ ನನಗೆ ಟಿಕೆಟ್‌ ಕೊಡದೆ, ಕುರುಬ ಸಮುದಾಯದ ಬೆಂಬಲ ಇದೆ ಎಂಬ ಕಾರಣದಿಂದ ಮುಖ್ಯಮಂತ್ರಿಯವರು ಇಲ್ಲಿಂದ ಸ್ಪರ್ಧಿಸಿದರೆ ನನಗೆ ಅನ್ಯಾಯವಾಗಲಿದೆ. ಹಾಗಾಗಿ ಕ್ಷೇತ್ರ ಬಿಟ್ಟುಕೊಡಲು ಆಗದು’ ಎಂದು ಅವರು ಇತರ ಮುಖಂಡರ ಬಳಿಯೂ ತಮ್ಮ ನೋವು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಮುಂದುವರಿದ ಸಭೆ: ಕಳೆದ ಎರಡು ದಿನಗಳಿಂದ ಇಲ್ಲಿ ನಡೆದಿರುವ ಪಕ್ಷದ ವುನಾವಣಾ ಪರಿಶೀಲನಾ ಸಮಿತಿ ಸಭೆ ಬುಧವಾರವೂ ಮುಂದುವರಿದಿದ್ದು, ಸಮಿತಿಯ ಮುಖ್ಯಸ್ಥ ಮಧುಸೂದನ ಮಿಸ್ತ್ರಿ ಅವರು ರಾಜ್ಯ ಉಸ್ತುವಾರಿ ಕೆ.ಕೆ. ವೇಣುಗೋಪಾಲ್ ಅವರೊಂದಿಗೆ ಟಿಕೆಟ್‌ ಹಂಚಿಕೆ ಕುರಿತು ಚರ್ಚೆ ನಡೆಸಿದರು.

ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ. ಶಿವಕುಮಾರ, ರಾಜ್ಯಸಭೆ ಸದಸ್ಯ ಕೆ.ಸಿ. ರಾಮಮೂರ್ತಿ ಸಭೆಯಲ್ಲಿ ಹಾಜರಿದ್ದು, ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಸಮಾಲೋಚನೆ ನಡೆಸಿದರು.

ಗುರುವಾರವೂ ಸಭೆ ಮುಂದುವರಿಯಲಿದ್ದು, ಮತ್ತಷ್ಟು ಮುಖಂಡರ ಅಭಿಪ್ರಾಯ ಸಂಗ್ರಹಿಸಲಿರುವ ಸಮಿತಿಯು ಅಭ್ಯರ್ಥಿಗಳ
ಪಟ್ಟಿ ಸಿದ್ಧಪಡಿಸಲಿದೆ. ಇದೇ 13 ರಂದು ನಡೆಯಲಿರುವ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಆ ಪಟ್ಟಿಗೆ ಅನುಮೋದನೆ ನೀಡುವ
ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.