ADVERTISEMENT

ಬಾರ್ ಗರ್ಲ್ಸ್ ಮೇಲೆ ಸಾಮೂಹಿಕ ಅತ್ಯಾಚಾರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 19:30 IST
Last Updated 19 ಅಕ್ಟೋಬರ್ 2012, 19:30 IST
ಬಾರ್ ಗರ್ಲ್ಸ್ ಮೇಲೆ ಸಾಮೂಹಿಕ ಅತ್ಯಾಚಾರ
ಬಾರ್ ಗರ್ಲ್ಸ್ ಮೇಲೆ ಸಾಮೂಹಿಕ ಅತ್ಯಾಚಾರ   

ರಾಮನಗರ/ಬೆಂಗಳೂರು: ಬೆಂಗಳೂರು ಹೊರ ವಲಯದ ಮರಿಯಪ್ಪನಪಾಳ್ಯ ಬಳಿಯ ಜಗಜ್ಯೋತಿ ಲೇಔಟ್‌ನಲ್ಲಿ ವಾಸವಾಗಿದ್ದ ಉತ್ತರ ಭಾರತ ಮೂಲದ ಮೂವರು ಯುವತಿಯರ ಮೇಲೆ (ಬಾರ್ ಗರ್ಲ್ಸ್) ಎಂಟಕ್ಕೂ ಹೆಚ್ಚು ಯುವಕರ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ.

ಯುವತಿಯರು ವಾಸವಿದ್ದ ಮನೆಯ ಮೇಲೆ ರಾತ್ರಿ ಏಕಾಏಕಿ ದಾಳಿ ನಡೆಸಿದ ಯುವಕರು ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ, ಮೊಬೈಲ್‌ಗಳು ಹಾಗೂ ಹಣ ದರೋಡೆ ಮಾಡಿದ್ದಾರೆ. ಬಳಿಕ, ಯುವತಿಯರಲ್ಲಿ ಐದು ಮಂದಿಯ (20ರಿಂದ 25 ವಯಸ್ಸಿನವರು) ಕಣ್ಣಿಗೆ ಬಟ್ಟೆ ಕಟ್ಟಿ ಬೇರೆಡೆ ಕರೆದೊಯ್ದು ಮೂವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಉಳಿದ ಇಬ್ಬರ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ್ದಾರೆ. ಘಟನೆ ಸಂಬಂಧ ಬಿಡದಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರಿನ ಗಾಂಧಿನಗರದ ಕ್ಯಾಸಿನೊ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಬಾರ್ ಗರ್ಲ್ಸ್ ಆಗಿ ಕೆಲಸ ಮಾಡುತ್ತಿದ್ದ ಎಂಟು ಯುವತಿಯರು ಜಗಜ್ಯೋತಿ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ಒಂದೂವರೆ ತಿಂಗಳಿಂದ ವಾಸವಿದ್ದರು. ಅವರು ಪಂಜಾಬ್, ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಜಾರ್ಖಂಡ್ ಮೂಲದವರು ಎಂದು ತಿಳಿದುಬಂದಿದೆ

ಆ ಯುವತಿಯರು ಪ್ರತಿನಿತ್ಯದಂತೆ ಕೆಲಸ ಮುಗಿಸಿಕೊಂಡು ಪುರುಷೋತ್ತಮ್ ಎಂಬುವರ ಜತೆ ವಾಹನವೊಂದರಲ್ಲಿ ರಾತ್ರಿ 12.30ರ ಸುಮಾರಿಗೆ ಮನೆಗೆ ಬಂದಿದ್ದಾರೆ. ಮಧ್ಯರಾತ್ರಿ 1.30ರ ಹೊತ್ತಿಗೆ ಕಾರಿನಲ್ಲಿ ಅವರ ಮನೆಯ ಬಳಿ ಬಂದ ಎಂಟರಿಂದ ಒಂಬತ್ತು ಮಂದಿ ಯುವಕರು ಪಿಸ್ತೂಲ್, ಚಾಕು, ಮಚ್ಚು ಲಾಂಗ್ ಮತ್ತಿತರ ಮಾರಕಾಸ್ತ್ರಗಳೊಂದಿಗೆ ಒಳಗೆ ನುಗ್ಗಿದ್ದಾರೆ. ಈ ವೇಳೆ ಮನೆಯ ಕೊಠಡಿಯೊಂದರಲ್ಲಿದ್ದ ಪುರುಷೋತ್ತಮ್ ಅವರು ಪ್ರತಿರೋಧ ತೋರಿದಾಗ ದುಷ್ಕರ್ಮಿಗಳು ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಯುವತಿಯರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಒಬ್ಬೊಬ್ಬರನ್ನೇ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ವಿವಸ್ತ್ರಗೊಳಿಸಿ ನಗ್ನ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಅಲ್ಲದೇ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ ಚಿನ್ನದ ಆರು ಉಂಗುರ, ಸರ, 15 ಸಾವಿರ ನಗದು, ಮೊಬೈಲ್‌ಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಅವರಲ್ಲಿ ಐದು ಯುವತಿಯರ ಕಣ್ಣಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮೂವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇತರೆ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಮಾಡಲೆತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅತ್ಯಾಚಾರದ ಸಂಗತಿಯನ್ನು ಯಾರಿಗಾದರೂ ತಿಳಿಸಿದರೆ, ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ನಗ್ನ ದೃಶ್ಯಗಳನ್ನು ಇಂಟರ್‌ನೆಟ್‌ನಲ್ಲಿ ಹರಿಬಿಡುವುದಾಗಿ ಮತ್ತು ಎಂಎಂಎಸ್ ಮಾಡುವುದಾಗಿ ದುಷ್ಕರ್ಮಿಗಳು ಯುವತಿಯರಿಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಯುವತಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಘಟನೆ ಸಂಬಂಧ ಪುರುಷೋತ್ತಮ್ ದೂರು ಕೊಟ್ಟಿದ್ದಾರೆ. ಅಪಹರಣಗೊಂಡು ಅತ್ಯಾಚಾರಕ್ಕೀಡಾದ ಯುವತಿಯರನ್ನು ಬಾರ್‌ನ ಮಾಲೀಕ ಸುನಿಲ್ ಅವರೇ ಶುಕ್ರವಾರ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮನೆಯ ಬಳಿ ಕರೆದುಕೊಂಡು ಬಂದರು ಎಂದು ಪುರುಷೋತ್ತಮ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಅತ್ಯಾಚಾರ, ಡಕಾಯಿತಿ ಮತ್ತು ಅಪಹರಣ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾರ್ ಮಾಲೀಕ ಸುನಿಲ್ ಮಾತನಾಡಿ, `ಬಾರ್‌ನಲ್ಲಿ ಕೆಲಸ ಮಾಡುತ್ತಿದ ಯುವತಿಯರನ್ನು ಪ್ರತಿನಿತ್ಯ ನಮ್ಮ ವಾಹನದಲ್ಲೇ ಕರೆದೊಯ್ದು ವಾಪಸ್ ಮನೆಗೆ ಬಿಡಲಾಗುತ್ತಿತ್ತು. ಯುವತಿಯರು ಹೋಗಿ ಬರುವುದನ್ನು ನೋಡಿಕೊಂಡಿದ್ದ ವ್ಯಕ್ತಿಗಳೇ ಈ ಕೃತ್ಯ ಎಸಗಿರಬಹುದು~ ಎಂದರು.

`ಯುವತಿಯರು ಒಂದು ತಿಂಗಳಿನಿಂದಷ್ಟೇ ಈ ಮನೆಯಲ್ಲಿದ್ದರು. ಮನೆಗೆ ಭದ್ರತಾ ಸಿಬ್ಬಂದಿ ಸಹ ನೇಮಿಸಲಾಗಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ಹುಡುಗ, ಹೊರಗೆ ಬಂದಿರುವ ವ್ಯಕ್ತಿಗಳು ಯಾರೆಂಬುದನ್ನು ಖಾತ್ರಿಪಡಿಸಿಕೊಳ್ಳದೆ ಬಾಗಿಲು ತೆರೆದಿರುವುದರಿಂದ ಈ ಘಟನೆ ನಡೆದಿದೆ~ ಎಂದು ಹೇಳಿದರು.

ವಿಶೇಷ ತಂಡ ರಚನೆ
`ಆರೋಪಿಗಳು ಅಪರಿಚಿತ ವ್ಯಕ್ತಿಗಳಾಗಿದ್ದಾರೆ. ಅವರನ್ನು ಬಾರಿನಲ್ಲಿ ಅಥವಾ ಬೇರೆಲ್ಲೂ ನೋಡಿರಲಿಲ್ಲ. ತಂಡದಲ್ಲಿದ್ದ ಬಹುತೇಕರು ಕನ್ನಡ ಮಾತನಾಡುತ್ತಿದ್ದರು. ಒಂದಿಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಯುವತಿಯರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ~ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ `ಪ್ರಜಾವಾಣಿ~ಗೆ ತಿಳಿಸಿದರು.

`ಮನೆಯ ಬಳಿ ಯುವತಿಯರ ರಕ್ಷಣೆಗೆಂದು ಒಬ್ಬ ಭದ್ರತಾ ಸಿಬ್ಬಂದಿ ಇದ್ದನಾದರೂ ದುಷ್ಕರ್ಮಿಗಳು ಆತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಈ ಕೃತ್ಯ ಎಸಗಿದ್ದಾರೆ. ಇನ್‌ಸ್ಪೆಕ್ಟರ್‌ಗಳಾದ ಭಾಸ್ಕರ್ ಒಕ್ಕಲಿಗ ಹಾಗೂ ಮಂಜುನಾಥ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ~ ಎಂದು ಹೇಳಿದರು.

ವಾರದಿಂದ ಸಂಚು
`ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಕ್ಕಪಕ್ಕದ ಮನೆಯವರ ವಿಚಾರಣೆ ನಡೆಸಿದ್ದೇನೆ. ಅಪರಿಚಿತ ವ್ಯಕ್ತಿಗಳಿದ್ದ ಒಮ್ನಿ ಕಾರೊಂದು ವಾರದಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಆಗಾಗ್ಗೆ ಸಂಚರಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನು ಗಮನಿಸಿದರೆ ಆರೋಪಿಗಳು, ಬಾರ್ ಗರ್ಲ್ಸ್‌ಗಳ ಚಲನವಲನದ ಮೇಲೆ ನಿಗಾ ಇಟ್ಟು ಯೋಜಿತ ರೀತಿಯಲ್ಲಿ ಈ ಕೃತ್ಯ ಎಸಗಿರುವುದು ಗೊತ್ತಾಗುತ್ತದೆ~ ಎಂದು ಅಗ್ರವಾಲ್ ಮಾಹಿತಿ ನೀಡಿದರು.

`ದುಷ್ಕರ್ಮಿಗಳು ಐದು ಯುವತಿಯರನ್ನು ಎಳೆದೊಯ್ದ ನಂತರವಾದರೂ ಇತರೆ ಯುವತಿಯರು ಕೂಗಾಡಿ, ನೆರೆಹೊರೆಯವರ ನೆರವು ಪಡೆದು ಪೊಲೀಸರಿಗೆ ಮಾಹಿತಿ ನೀಡಬಹುದಿತ್ತು. ಆದರೆ, ಅವರು ಹಾಗೇಕೆ ಮಾಡಲಿಲ್ಲ? ಎಲ್ಲರೂ ಆತಂಕಗೊಂಡಿದ್ದರೆ ಎಂಬ ಸಂಗತಿಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ~ ಎಂದರು.
ಪ್ರಕರಣಗಳಲ್ಲಿ ಸಾಮ್ಯತೆ

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಬಳಿ ನೇಪಾಳ ಮೂಲದ ಕಾನೂನು ವಿದ್ಯಾರ್ಥಿನಿ ಮೇಲೆ ಇತ್ತೀಚೆಗೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ.

ಜಗಜ್ಯೋತಿ ಲೇಔಟ್‌ನಲ್ಲಿನ ಅತ್ಯಾಚಾರ ಪ್ರಕರಣಕ್ಕೂ ಮತ್ತು ಜ್ಞಾನಭಾರತಿ ಬಳಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಘಟನೆಗೂ ಸಾಮ್ಯತೆ ಕಾಣುತ್ತಿದೆ. ಎರಡೂ ಪ್ರದೇಶಗಳು ಹತ್ತಿರವೇ ಇರುವ ಕಾರಣ, ಒಂದೇ ಗುಂಪಿನ ಸದಸ್ಯರು ಈ ಕೃತ್ಯ ಎಸಗಿರಬಹುದೆಂಬ ಶಂಕೆ ಮೂಡಿದೆ. ಈ ಹಿನ್ನೆಲೆಯಲ್ಲಿ ಜ್ಞಾನಭಾರತಿ ಮತ್ತು ಬಿಡದಿ ಠಾಣೆಯ ಪೊಲೀಸರ ನೆರವಿನೊಂದಿಗೆ ಪ್ರಕರಣದ ತನಿಖೆ ನಡೆಸಲಾಗುತ್ತದೆ ಎಂದು ಅಗ್ರವಾಲ್ ವಿವರ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.