ADVERTISEMENT

ಬಾಹ್ಯಾಕಾಶ ವಿಜ್ಞಾನ ಸಮ್ಮೇಳನ ಆರಂಭ

​ಪ್ರಜಾವಾಣಿ ವಾರ್ತೆ
Published 14 ಜುಲೈ 2012, 19:30 IST
Last Updated 14 ಜುಲೈ 2012, 19:30 IST

ಮೈಸೂರು: `ಸುವರ್ಣ ಮಹೋತ್ಸವ~ ಸಂಭ್ರಮದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆಶ್ರಯದಲ್ಲಿ 39ನೇ ಕಾಸ್ಪರ್- 2012 ಜಾಗತಿಕ ಬಾಹ್ಯಾಕಾಶ ಸಮ್ಮೇಳನ ಮೈಸೂರಿನಲ್ಲಿ  ಶನಿವಾರ ಆರಂಭವಾಯಿತು.

ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಈ ಪ್ರತಿಷ್ಠಿತ ಸಮ್ಮೇಳನವು 33 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಇದೀಗ ಮೈಸೂರಿನ ಇನ್ಫೋಸಿಸ್‌ನಲ್ಲಿ ಒಂಬತ್ತು ದಿನಗಳವರೆಗೆ (ಜುಲೈ 14ರಿಂದ 22) ನಡೆಯಲಿರುವ ಈ ಸಮ್ಮೇಳನದಲ್ಲಿ 74 ದೇಶಗಳ 2300 ಬಾಹ್ಯಾಕಾಶ ವಿಜ್ಞಾನಿಗಳು ಭಾಗವಹಿಸುತ್ತಾರೆ.

ಶನಿವಾರ ನೋಂದಣಿ ಆರಂಭವಾಗಿದ್ದು ಭಾನುವಾರ ವಿಚಾರ ಮಂಡನೆಗಳು ನಡೆಯಲಿವೆ. ಸೋಮವಾರ ಸಂಜೆ ವಿದ್ಯುಕ್ತವಾಗಿ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ.  `ಮಾನವಕುಲದ ಏಳ್ಗೆಗೆ ಬಾಹ್ಯಾಕಾಶ~ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯಲಿದೆ.

ಫಿಸಿಕಲ್ ಸಂಶೋಧನೆ ಪ್ರಯೋಗಾಲಯ (ಪಿಆರ್‌ಎಲ್) ಅಧ್ಯಕ್ಷ ಪ್ರೊ. ಯು.ಆರ್. ರಾವ್, ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ `ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಯುದ್ಧ ಕ್ಷಿಪಣಿ ಬಳಕೆಯಾದ ಜಾಗ ಮೈಸೂರು. ಹೈದರಾಲಿ ಹಾಗೂ ನಂತರ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಕ್ಷಿಪಣಿಗಳನ್ನು ಉಪಯೋಗಿಸಿದ್ದ. ಆದ್ದರಿಂದ ರಾಕೆಟ್ ತಂತ್ರಜ್ಞಾನದ ಮೂಲಕ ಅಭಿವೃದ್ಧಿಯಾದ ಬಾಹ್ಯಾಕಾಶ ವಿಜ್ಞಾನದ ಮಹತ್ತರ ಸಮ್ಮೇಳನಕ್ಕೆ ಇದೇ ಸೂಕ್ತ ಜಾಗ~ ಎಂದರು.

`ವಿದೇಶಗಳಲ್ಲಿ ಸಮ್ಮೇಳನ ನಡೆದಾಗ ಭಾಗವಹಿಸಲು ಭಾರತೀಯ ವಿಜ್ಞಾನಿಗಳಿಗೆ ಹೆಚ್ಚಿನ ಅವಕಾಶ ಸಿಗುವುದಿಲ್ಲ. ಆದರೆ ನಮ್ಮಲ್ಲಿಯೇ ನಡೆದಾಗ ಇಲ್ಲಿಯ ವಿಜ್ಞಾನಿಗಳು ಹಾಗೂ ಸಂಶೋಧಕರಿಗೆ ಹೆಚ್ಚು ಅವಕಾಶ ಸಿಗುತ್ತದೆ. ಒಂಬತ್ತು ದಿನಗಳಲ್ಲಿ ಇನ್ಫೋಸಿಸ್ ಆವರಣದ 28 ಪ್ರತ್ಯೇಕ ವೇದಿಕೆಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಗೋಷ್ಠಿಗಳು ನಡೆಯಲಿವೆ~ ಎಂದರು.

`1958ರಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ಕೌನ್ಸಿಲ್,  ಬಾಹ್ಯಾಕಾಶ ಸಂಶೋಧನಾ ಸಮಿತಿ (ಕಾಸ್ಪರ್) ರಚಿಸಿತು. 1979ರಲ್ಲಿ ಮೊಟ್ಟಮೊದಲ ಕಾಸ್ಪರ್ ಸಭೆಯನ್ನು ನಡೆಸಿದ ಹೆಗ್ಗಳಿಕೆ ಬೆಂಗಳೂರಿನದ್ದು~ ಎಂದು ತಿಳಿಸಿದರು.
ಮುಖ್ಯಸ್ಥರ ಮುಖಾಮುಖಿ: `ಕಾಸ್ಪರ್ ಸಮ್ಮೇಳನದಲ್ಲಿ ಜಗತ್ತಿನ ಎಂಟು ಪ್ರಮುಖ ಬಾಹ್ಯಾಕಾಶ ಸಂಶೋಧನ ಕೇಂದ್ರಗಳ ಮುಖ್ಯಸ್ಥರು ಮುಖಾಮುಖಿಯಾಗಿ ವಿಚಾರ ವಿನಿಮಯ ನಡೆಸಲಿದ್ದಾರೆ. ಇಸ್ರೋ ಅಧ್ಯಕ್ಷ ಕೆ. ರಾಧಾಕೃಷ್ಣನ್, ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಕೇಂದ್ರ (ನಾಸಾ) ಯೋಜನೆ ಮತ್ತು ಅಂತರರಾಷ್ಟ್ರೀಯ ಯೋಜನೆ ವಿಜ್ಞಾನ ಮಿಷನ್  ನಿರ್ದೇಶಕ  ಎಂ. ಎಸ್. ಅಲನ್, ಸೆಂಟರ್ ನ್ಯಾಷನಲ್ ಡಿಎಟ್ಯುಡ್ಸ್ ಸ್ಪೇಷಿಯಲ್ಸ್ (ಸಿಎನ್‌ಇಎಸ್) ಕಾರ್ಯಕ್ರಮ ಮತ್ತು ಯೋಜನೆ ಸಹ ನಿರ್ದೇಶಕ ಪ್ರೊ. ರಿಚರ್ಡ್ ಬೋನವಿಲ್, ಕೆನಡೆಯನ್ ಸ್ಪೇಸ್ ಏಜೆನ್ಸಿಯ ನಿರ್ದೇಶಕ ಡಿ. ಕೆಂಡಲ್, ಜರ್ಮನಿಯ ಡಿಎಲ್‌ಆರ್‌ನ ಕಾರ್ಯನಿರ್ವಾಹಕ ಮಂಡಳಿ ಸದಸ್ಯ  ಪ್ರೊ. ಎಚ್. ಡಿಟ್ಟಸ್, ಇಟಾಲಿಯನ್ ಸ್ಪೇಸ್ ಏಜಿನ್ಸಿ ಅಧ್ಯಕ್ಷ ಇ. ಸಗೇಸ್, ಬ್ರೆಜಿಲ್ ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ ಅಧ್ಯಕ್ಷ ಥೈರ‌್ಸೋ ವಿಲ್ಲೆಲಾ ಮೈಸೂರಿಗೆ ಆಗಮಿಸಲಿದ್ದಾರೆ~ ಎಂದು ಪ್ರೊ. ಯು.ಆರ್. ರಾವ್ ತಿಳಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಕಾಸ್ಪರ್ ಸಂಘಟನಾ ಸಮಿತಿ ಅಧ್ಯಕ್ಷ, ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಸಲಹಾ ಸಮಿತಿ ಅಧ್ಯಕ್ಷ  ಡಾ. ಜಿವೋನಿ ಎಫ್ ಬಿಗ್ನಾಮಿ ಮಾತನಾಡಿ `ಬ್ರಹ್ಮಾಂಡದ ಕೇವಲ ನಾಲ್ಕರಷ್ಟು ಭಾಗ ಮಾತ್ರ ಸಂಶೋಧನೆಗೆ ಬಳಕೆಯಾಗಿದೆ. ಆದರೆ ಇನ್ನೂ ಸಂಶೋಧಿಸಬೇಕಾದ ಶೇ 96ರಷ್ಟು ಭಾಗದಲ್ಲಿ ಏನಿದೆ, ಏನಿಲ್ಲ ಎನ್ನುವುದು ಗೊತ್ತಿಲ್ಲ. ಆದ್ದರಿಂದ ಬಾಹ್ಯಾಕಾಶ ವಿಜ್ಞಾನದ ಪರೀಧಿ ಮತ್ತು ಅವಕಾಶ ಬಹಳಷ್ಟು ವಿಸ್ತಾರವಾಗಿದೆ~ ಎಂದು ಹೇಳಿದರು.  ಇಸ್ರೋ ಅಧ್ಯಕ್ಷ   ಕೆ. ರಾಧಾಕೃಷ್ಣನ್, ಸದಸ್ಯ ಕಾರ್ಯದರ್ಶಿ ಎ. ಜಯರಾಮನ್ ಉಪಸ್ಥಿತರಿದ್ದರು.

ಮುಂಗಾರು ವೈಫಲ್ಯ: ತಂತ್ರಜ್ಞಾನಕ್ಕೆ ಸವಾಲು
ಮೈಸೂರು: ಪ್ರಸಕ್ತ ಮುಂಗಾರು ಮಳೆಯ ಕೊರತೆ ಉಂಟಾಗಿರುವುದು ಹವಾಮಾನ ತಂತ್ರಜ್ಞಾನಕ್ಕೆ ದೊಡ್ಡ ಸವಾಲು. ಇದರಿಂದ ಕೃಷಿ ಕ್ಷೇತ್ರದ ಮೇಲೆ ಕೆಟ್ಟ ಪರಿಣಾಮ ಉಂಟಾಗಿ ದೇಶದಲ್ಲಿ ಹಣದುಬ್ಬರ ಹೆಚ್ಚಾಗುವ ಸಂಭವವಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಪ್ರೊ. ಯು.ಆರ್. ರಾವ್ ಆತಂಕ ವ್ಯಕ್ತಪಡಿಸಿದರು.

ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, `ನಮ್ಮ ಆರ್ಥಿಕ ವೃದ್ಧಿ ದರದ ಶೇ. 18ರಷ್ಟು ಭಾಗವು ಕೃಷಿಯ ಮೇಲೆ ಅವಲಂಬಿತವಾಗಿದೆ.  ಆದರೆ ಮುಂಗಾರು ವೈಫಲ್ಯಕ್ಕೆ ಏನು ಕಾರಣ ಎಂದು ಕಂಡುಹಿಡಿಯಲು ನಮಗೆ ಸಾಧ್ಯವಾಗುತ್ತಿಲ್ಲ~ ಎಂದು ಹೇಳಿದರು.

`ಇವತ್ತು ದೇಶದಲ್ಲಿ ವಿದ್ಯುತ್ ಕೊರತೆಯ ಸಮಸ್ಯೆ ಅಪಾರವಾಗಿದೆ. ಜಲವಿದ್ಯುತ್ ಹೊರತುಪಡಿಸಿದರೆ, ಉಳಿದೆಲ್ಲ ವಿದ್ಯುತ್ ಉತ್ಪಾದನಾ ವಿಧಾನಗಳು ದುಬಾರಿಯಾಗಿವೆ. ಕಲ್ಲಿದ್ದಲಿನಿಂದ ಒಂದು ಮೇಗಾವ್ಯಾಟ್‌ಉತ್ಪಾದನೆಗೆ ನಾಲ್ಕು ಕೋಟಿ ಖರ್ಚಾಗುತ್ತದೆ. ಇದೇ ಪ್ರಮಾಣದ ವಿದ್ಯುತ್ ಅನ್ನು ಸೌರಶಕ್ತಿ ಮೂಲಕ ಉತ್ಪಾದಿಸಲು 23 ರಿಂದ 25 ಕೋಟಿ ರೂಪಾಯಿ ಅಗತ್ಯ~ ಎಂದು ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT