ADVERTISEMENT

ಬಿಎಸ್‌ವೈಗೆ ಜಾಮೀನು : 17ರಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರರ ವಿರುದ್ಧ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡು ಖಾಸಗಿ ದೂರುಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಇದೇ 17ಕ್ಕೆ ಮುಂದೂಡಿದ್ದು, ಅಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ.

`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಮಂಗಳವಾರ ನಡೆಸಿದ ವಿಚಾರಣೆ ವೇಳೆ ಪ್ರಮುಖ ಆರೋಪಿಗಳಾಗಿರುವ ಯಡಿಯೂರಪ್ಪ, ಅವರ ಪುತ್ರ ಬಿ.ವೈ.ರಾಘವೇಂದ್ರ ಹಾಗೂ ಮತ್ತೊಬ್ಬ ಆರೋಪಿ ಎನ್.ಅಕ್ಕಮಹಾದೇವಿ ಗೈರುಹಾಜರಾಗಿದ್ದರು.
 
ಕಲಾಪ ಆರಂಭವಾಗುತ್ತಿದ್ದಂತೆಯೇ ಯಡಿಯೂರಪ್ಪ ಪರ ವಕೀಲ ರವಿ ಬಿ.ನಾಯಕ್ ಅವರು ಖುದ್ದು ಹಾಜರಿಯಿಂದ ವಿನಾಯಿತಿ ನೀಡಬೇಕು ಎಂದು ಕೋರಿ ಮೆಮೊ ಸಲ್ಲಿಸಿದರು. ಬಿಜೆಪಿ ವರಿಷ್ಠರ ಸೂಚನೆಯಂತೆ ಯಡಿಯೂರಪ್ಪ ಅವರು ಪಕ್ಷದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದಾರೆ. ಹೀಗಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಅಲ್ಲದೆ ಅವರ ಖುದ್ದು ಹಾಜರಿಯಿಂದ ನ್ಯಾಯಾಲಯದ ಕಲಾಪಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ವಿನಾಯಿತಿ ನೀಡಬೇಕು ಎಂದು ಕೋರಿದರು.

ಇದನ್ನು ಒಪ್ಪದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ಕೋರ್ಟ್ ಆವರಣದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮಂಗಳವಾರದ ಮಟ್ಟಿಗೆ ಹಾಜರಿಯಿಂದ ವಿನಾಯಿತಿ ನೀಡಲಾಗಿದ್ದು, ಶನಿವಾರ ಖುದ್ದಾಗಿ ಹಾಜರಾಗಬೇಕು ಎಂದು ಆದೇಶಿಸಿದರು. ಯಡಿಯೂರಪ್ಪ ಮತ್ತು ಇತರ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗೆ, ಸಿರಾಜಿನ್ ಬಾಷಾ ಪರ ವಕೀಲರಾದ ಸಿ.ಎಚ್. ಹನುಮಂತರಾಯ ಆಕ್ಷೇಪಣೆ ಸಲ್ಲಿಸಿದ್ದು, ಇದರ ಬಗ್ಗೆ ಇದೇ 17ರಂದು ವಿಚಾರಣೆ ನಡೆಯಲಿದೆ.  ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್. ಸೋಹನ್‌ಕುಮಾರ್, ಶಾಸಕ ಡಾ.ಡಿ.ಹೇಮಚಂದ್ರ ಸಾಗರ್ ಸೇರಿದಂತೆ ಉಳಿದ ಆರೋಪಿಗಳು ಹಾಜರಾಗಿದ್ದರು.
 
ಉತ್ಸುಕರಾಗಿಲ್ಲ: `ಇದು ಖಾಸಗಿ ದೂರು ಆಗಿರುವುದರಿಂದ ಇದರಲ್ಲಿ ನಮ್ಮ ಪಾತ್ರ ಏನೂ ಇರುವುದಿಲ್ಲ. ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿಲ್ಲ. ಹೀಗಾಗಿ ಅರ್ಜಿದಾರರ ಪರವಾಗಿ ಇಲ್ಲವೇ ವಿರುದ್ಧವಾಗಿ ಆಕ್ಷೇಪಣೆ ಸಲ್ಲಿಸುವ, ಕಲಾಪಗಳಲ್ಲಿ ಭಾಗವಹಿಸುವ ಅವಶ್ಯಕತೆ ಇಲ್ಲ~ ಎಂದು ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಮೋದ್‌ಚಂದ್ರ ತಿಳಿಸಿದರು. ನ್ಯಾಯಾಧೀಶರ ಸೂಚನೆಯಂತೆ ಈ ಬಗ್ಗೆ ಲಿಖಿತ ಹೇಳಿಕೆ ಸಲ್ಲಿಸಿದರು. ನ್ಯಾಯಾಲಯ ನಿರ್ದೇಶನ ನೀಡಿದರೆ ಮಾತ್ರ ಮುಂದೆ ಈ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಅರ್ಜಿದಾರರ ಪರ ಡೀಮ್ಡ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಾದ ಮಾಡಲು ಸಿ.ಎಚ್.ಹನುಮಂತರಾಯ ಅವರಿಗೆ ಅವಕಾಶ ನೀಡಬಾರ ಎಂದು ಯಡಿಯೂರಪ್ಪ ಪರ ವಕೀಲ ರವಿ ಬಿ.ನಾಯಕ್ ಎತ್ತಿದ್ದ ಆಕ್ಷೇಪಣೆಗೆ ಸಂಬಂಧಿಸಿದಂತೆ ತೀರ್ಪು ನೀಡಿದ ನ್ಯಾಯಾಧೀಶ ಸುಧೀಂದ್ರ ರಾವ್, ವಿಚಾರಣೆ ಮುಗಿದು ಆರೋಪಪಟ್ಟಿ ಸಲ್ಲಿಸುವವರೆಗೂ ವಾದ ಮಂಡಿಸಲು ಅವಕಾಶವಿದೆ. 1998ರಲ್ಲಿ ಸುಪ್ರೀಂಕೋರ್ಟ್ ಶಿವಕುಮಾರ್ ಪ್ರಕರಣದ ತೀರ್ಪಿನಲ್ಲಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದರು. ಕೊನೆಗೆ ನಾಯಕ್ ಸಹ ಇದಕ್ಕೆ ಸಮ್ಮತಿಸಿದರು.

ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ವರದಿ ನೀಡಲು ನೀಡಿದ್ದ ಆರು ವಾರಗಳ ಗಡುವು ಮಂಗಳವಾರಕ್ಕೆ ಮುಕ್ತಾಯವಾಗಿದ್ದು, ಇನ್ನೂ ವರದಿ ನೀಡದೆ ಇರುವುದಕ್ಕೆ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರಕರಣದ ವಿಚಾರಣೆಗೆ ಇನ್ನೂ ಕಾಲಾವಕಾಶ ಬೇಕು ಎಂದು ಕೋರಿ ಸಲ್ಲಿಸಿದ್ದ ಮೆಮೊನಲ್ಲಿ ಯಾರು ತನಿಖೆ ನಡೆಸುತ್ತಿದ್ದಾರೆ ಎಂಬುದನ್ನು ಸರಿಯಾಗಿ ಪ್ರಸ್ತಾಪಿಸಿರಲಿಲ್ಲ.

 ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ಪ್ರಕರಣದ ತನಿಖೆಯನ್ನು ಡಿವೈಎಸ್‌ಪಿ ನಡೆಸುತ್ತಾರೋ ಇಲ್ಲವೇ  ಎಸ್‌ಪಿ ನಡೆಸುತ್ತಾರೋ ಎಂದು ಕೇಳಿದ್ದಕ್ಕೆ ವಕೀಲರು ತಬ್ಬಿಬ್ಬಾದರು. ಮಧ್ಯಾಹ್ನ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ನ್ಯಾಯಾಲಯದ ಮುಂದೆ ಹಾಜರಾದ ಲೋಕಾಯುಕ್ತ ಡಿವೈಎಸ್‌ಪಿ, `ಈ ಪ್ರಕರಣದ ವಿಚಾರಣೆಗೆ ಇನ್ನೂ ಆರು ವಾರಗಳ ಕಾಲಾವಕಾಶ ಬೇಕು. ನನ್ನ ನೇತೃತ್ವದಲ್ಲಿಯೇ ವಿಚಾರಣೆ ನಡೆಯಲಿದೆ~ ಎಂದು ತಿಳಿಸಿದರು. ಈ ಬಗ್ಗೆ ಲಿಖಿತ ಹೇಳಿಕೆ ಪಡೆದ ನಂತರ ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.