ADVERTISEMENT

ಬಿಎಸ್‌ವೈ ಜೀವ ಬೆದರಿಕೆ:ಹಿರೇಮಠ ಆರೋಪ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ಹುಬ್ಬಳ್ಳಿ: `ರಾಜ್ಯದಲ್ಲಿನ ಗಣಿ ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ನನ್ನನ್ನು ಮಧ್ಯವರ್ತಿಗಳ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಧಾನಕ್ಕೆ ಆಹ್ವಾನಿಸಿದ್ದರು. ಅದಕ್ಕೆ ನಾನು ಒಪ್ಪದ ಕಾರಣ ಜೀವ ಬೆದರಿಕೆ ಒಡ್ಡಿದ್ದಾರೆ~ ಎಂದು ಧಾರವಾಡದ ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್ .ಹಿರೇಮಠ ಮಂಗಳವಾರ ಇಲ್ಲಿ ಆರೋಪಿಸಿದರು.

`ಇಬ್ಬರಿಗೂ ಪರಿಚಯ ಇರುವ ವ್ಯಕ್ತಿಗಳಿಂದ ಯಡಿಯೂರಪ್ಪ ಸಂಧಾನಕ್ಕೆ ಆಹ್ವಾನಿಸಿದ್ದರು. ಸಂದರ್ಭ ಬಂದಾಗ ಮಧ್ಯಸ್ಥಿಕೆ ವಹಿಸಿದವರ ಹೆಸರು ಬಹಿರಂಗಪಡಿಸುತ್ತೇನೆ. ನಾನು ಸಂಧಾನಕ್ಕೆ ಒಪ್ಪದ ಕಾರಣ ನನಗೆ ಜೀವ ಬೆದರಿಕೆ ಒಡ್ಡಿರುವುದು ಮೊದಲ ಹೆಜ್ಜೆಯಾಗಿದ್ದು, ಇದೇ ಮುಂದುವರೆದಲ್ಲಿ ತಾವು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಬಿಎಸ್‌ವೈ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿ ಅದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತರುತ್ತೇನೆ~ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಆರೋಪ ನಿರಾಕರಣೆ

ಮೈಸೂರು: `ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಹಿರೇಮಠ್ ಅವರು ನನ್ನ ವಿರುದ್ಧ ಮಾಡಿದ ಆರೋಪ ನಿರಾಧಾರ. ಸಂಧಾನಕಾರರನ್ನು ಕಳುಹಿಸಿದ್ದರು, ಕೊಲೆ ಬೆದರಿಕೆ ಹಾಕಿಸಿದ್ದರು ಎಂದು ನನ್ನ ವಿರುದ್ಧ ಆರೋಪ ಮಾಡಲಾಗಿದೆ. ಗುರುತರ ಆರೋಪ ಮಾಡಿ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ನಿರಂತರ ಯತ್ನ ನಡೆಯುತ್ತಿದೆ. ಆದರೆ ನಾನು ಯಾರಿಗೂ ಕೊಲೆ ಬೆದರಿಕೆ ಹಾಕಿಸಿಲ್ಲ.

ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು  ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ಕಲಾಮಂದಿರದಲ್ಲಿ ಮಂಗಳವಾರ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಹಿರೇಮಠ್ ಬಗ್ಗೆ ನನಗೆ ಗೌರವ ಇದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.