ನವದೆಹಲಿ (ಪಿಟಿಐ): ಗಣಿ ಕಂಪೆನಿಯಿಂದ ಲಂಚ ಪಡೆದ ಹಾಗೂ ಜಮೀನನ್ನು ಅಕ್ರಮವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಆರೋಪ ಎದುರಿಸುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಯಡಿಯೂರಪ್ಪ ಅವರಿಗೆ ಹೈಕೋರ್ಟ್ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಟಿ.ಎಸ್.ಥಾಕೂರ್ ಹಾಗೂ ಇಬ್ರಾಹಿಂ ಖಲೀಫುಲ್ಲಾ ಅವರನ್ನು ಒಳಗೊಂಡ ಪೀಠವು ಸಿಬಿಐ ಮನವಿಯನ್ನು ತಳ್ಳಿಹಾಕಿತು.
ಅರ್ಜಿ ವಿಚಾರಣೆ ವೇಳೆ ಸಿಬಿಐ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮೋಹನ್ ಪರಾಶರನ್ ಅವರನ್ನು ಕುರಿತು ಪೀಠವು `ಈ ವ್ಯಕ್ತಿಯನ್ನು ನೀವು ಜೈಲಿಗೆ ತಳ್ಳಲು ಬಯಸುತ್ತೀರಾ?, ಏತಕ್ಕಾಗಿ?~ ಎಂದು ಕೇಳಿತು.
ಯಡಿಯೂರಪ್ಪ ಅವರು ಸಿಬಿಐ ಜತೆ ವಿಚಾರಣೆಗೆ ಸಹಕರಿಸುತ್ತಿಲ್ಲ. ಆದ್ದರಿಂದ ಅವರ ಜಾಮೀನು ರದ್ದುಪಡಿಸಬೇಕು ಎಂಬ ಪರಾಶರನ್ ಅವರ ವಾದವನ್ನು ತಳ್ಳಿಹಾಕಿದ ಪೀಠವು `ಒಂದು ವೇಳೆ ಅವರು ವಿಚಾರಣೆಗೆ ಸಹಕರಿಸದಿದ್ದರೆ ಆಗ ನೀವು ಜಾಮೀನು ರದ್ದುಪಡಿಸಲು ಕೇಳಿ~ ಎಂದು ಹೇಳಿತು.
ಜಿಂದಾಲ್ ಸಮೂಹದ ಗಣಿ ಕಂಪೆನಿಯಿಂದ ಲಂಚ ಪಡೆದ ಹಾಗೂ ನಗರದ ರಾಚೇನಹಳ್ಳಿ ಬಳಿ ಜಮೀನನ್ನು ಅಕ್ರಮವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ. ವಿಜಯೇಂದ್ರ ಹಾಗೂ ಅಳಿಯ ಸೋಹನ್ ಕುಮಾರ್ ಅವರಿಗೆ ಹೈಕೋರ್ಟ್ ಜೂನ್ 21ರಂದು ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಸಿಬಿಐನ ಮೇಲ್ಮನವಿಯಿಂದ ಮತ್ತೊಮ್ಮೆ ಬಂಧನದ ಭಯದಲ್ಲಿದ್ದ ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ತೀರ್ಪು ನಿರಾಳತೆ ಉಂಟುಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.