ADVERTISEMENT

ಬಿಎಸ್‌ವೈ ಬಣಕ್ಕೆ ಆಶಾದಾಯಕ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 19:30 IST
Last Updated 19 ಜೂನ್ 2012, 19:30 IST

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಪದಚ್ಯುತಿಗೆ ಪಟ್ಟುಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಣಕ್ಕೆ ಹೈಕಮಾಂಡ್‌ನಿಂದ ಆಶಾದಾಯಕವಾದ ಪ್ರತಿಕ್ರಿಯೆ ಬಂದಿದೆ ಎಂದು ತಿಳಿದುಬಂದಿದೆ.

`ಶಾಸಕಾಂಗ ಪಕ್ಷದ ನಾಯಕನ ಬದಲಾವಣೆಗಾಗಿ ದೆಹಲಿಗೆ ಬಂದರೆ ಒತ್ತಡಕ್ಕೆ ಮಣಿದು ಬದಲಾವಣೆ ಮಾಡಲಾಯಿತು ಎಂಬ ಅಭಿಪ್ರಾಯ ಮೂಡುತ್ತದೆ. ಹಾಗಾಗಿ ದೆಹಲಿಗೆ ಬರಬೇಡಿ. ನಾವೇ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂಬ ಸಂದೇಶ ರವಾನೆಯಾಗಿದೆ~ ಎಂದು ಪಕ್ಷದ ನಂಬಲರ್ಹ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

`ಹೈಕಮಾಂಡ್ ಈ ಸಂದೇಶವನ್ನು ನೀಡಿದ್ದರೂ ಯಡಿಯೂರಪ್ಪ ಬಣ ಮಾತ್ರ ನಾವು ದೆಹಲಿಗೆ ಬರದಿದ್ದರೆ ನಾಯಕತ್ವ ಬದಲಾವಣೆ ವಿಚಾರ ಮತ್ತೆ ಮುಂದಕ್ಕೆ ಹೋಗುತ್ತದೆ. ಆದ್ದರಿಂದ ದೆಹಲಿಗೆ ಬಂದು ನಿಮ್ಮನ್ನು ಭೇಟಿ ಮಾಡುತ್ತೇವೆ~ ಎಂದು ಪ್ರತಿಯಾಗಿ ಪಟ್ಟು ಹಿಡಿದಿದೆ ಎನ್ನಲಾಗಿದೆ.

ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಒಕ್ಕಲಿಗರು ಬಿಜೆಪಿ ಕೈ ಹಿಡಿಯುವ ಸಂಭವ ಕಡಿಮೆ. ಆದ್ದರಿಂದ ಸದಾನಂದಗೌಡರ ಬದಲಿಗೆ ಜಗದೀಶ ಶೆಟ್ಟರ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೆ ಲಿಂಗಾಯತರು ಮತ್ತೆ ಪಕ್ಷವನ್ನು ಬೆಂಬಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶೆಟ್ಟರ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಉತ್ತರ ಕರ್ನಾಟಕದ ಶಾಸಕರ ಅಭಿಪ್ರಾಯವೂ ಆಗಿದೆ. ಈ ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಈ ವಿಚಾರದಲ್ಲಿ ಹೈಕಮಾಂಡ್ ಕೂಡ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿಯೇ ಸದ್ಯಕ್ಕೆ ದೆಹಲಿಗೆ ಬರುವುದು ಬೇಡ ಎಂದು ಯಡಿಯೂರಪ್ಪ ಬಣಕ್ಕೆ ಹೈಕಮಾಂಡ್ ಸೂಚಿಸಿದೆ ಎಂದು ಮೂಲಗಳು ವಿವರಿಸಿವೆ.

ಪಕ್ಷದಲ್ಲಿ ಹಠಾತ್ತಾಗಿ ಈ ಬೆಳವಣಿಗೆಯಾಗಲು ಯಡಿಯೂರಪ್ಪ ಅವರ ಬೆಂಬಲಿಗ ಲೋಕಸಭಾ ಸದಸ್ಯರೊಬ್ಬರ ಮೇಲೆ ಸದಾನಂದಗೌಡರು ರೇಗಿದ್ದು ಕಾರಣ ಎನ್ನಲಾಗಿದೆ.

`ಮುಖ್ಯಮಂತ್ರಿಗಳಿಂದ ನಿಂದನೆಗೆ ಒಳಗಾದ ಆ ಸಂಸದರು ತಕ್ಷಣವೇ ಯಡಿಯೂರಪ್ಪ ಅವರನ್ನು ಕಂಡು ತಮಗಾದ ನೋವನ್ನು ತೋಡಿಕೊಂಡರು. ನನ್ನ ಬೆಂಬಲಕ್ಕೆ ನಿಂತವರು ಎಂಬ ಕಾರಣಕ್ಕೆ ಅವರ ಕೆಲಸ ಮಾಡಿಕೊಡದೇ ನಿಂದಿಸಿ ಕಳುಹಿಸಿದ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಇಳಿಸಲೇಬೇಕು ಎಂದು ತೀರ್ಮಾನಿಸಿದರು. ಬೆಂಗಳೂರಿನಲ್ಲಿ ಸೋಮವಾರ ನಡೆದ ವಿಧಾನಸಭೆಯ ವಜ್ರ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬೆಂಬಲಿಗ ಶಾಸಕರನ್ನು ಸಂಪರ್ಕಿಸಿ ತಕ್ಷಣವೇ ತಮ್ಮ ಮನೆಗೆ ಕರೆದು, ಸಭೆ ನಡೆಸಿ ತಮ್ಮ ಬೇಡಿಕೆಯನ್ನು ಮತ್ತೆ ಮಂಡಿಸಿದರು~ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.