ADVERTISEMENT

ಬಿಎಸ್‌ವೈ ಬಣದಲ್ಲಿ ಒಡಕು?

​ಪ್ರಜಾವಾಣಿ ವಾರ್ತೆ
Published 19 ಮೇ 2012, 19:30 IST
Last Updated 19 ಮೇ 2012, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲಿಗರಲ್ಲೂ ಒಡಕು ಧ್ವನಿ ಕಾಣಿಸಿಕೊಂಡಿದೆ. ಅವರ ಬಣದ ಕೆಲವರು ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದರೆ ಇನ್ನೂ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಒಡಕಿಗೆ ಕಾರಣ ಎನ್ನಲಾಗಿದೆ.

ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ಆರಂಭಿಸಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಮುಖ್ಯಮಂತ್ರಿ ಅಥವಾ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವುದು ದೂರದ ಮಾತು. ಈ ಸಂದರ್ಭದಲ್ಲಿ ಗೊಂದಲವನ್ನು ಜೀವಂತವಾಗಿ ಇಟ್ಟುಕೊಂಡು ಮುಂದುವರಿಯುವುದರಲ್ಲಿ ಅರ್ಥ ಇಲ್ಲ. ಆದಷ್ಟು ಬೇಗ ಪರಿಸ್ಥಿತಿ ತಿಳಿಯಾಗಬೇಕು ಎಂಬುದು ಅವರದೇ ಬಣದ ಬಹುತೇಕ ಸಚಿವರ ಅಭಿಪ್ರಾಯ.

ಆದರೆ, ಇದಕ್ಕೆ ಯಡಿಯೂರಪ್ಪ ಮತ್ತು ಅವರ ಆಪ್ತ ಸಚಿವರೊಬ್ಬರು ಒಪ್ಪುತ್ತಿಲ್ಲ. ಬದಲಿಗೆ, ಬಿಜೆಪಿಯಲ್ಲಿನ ಗೊಂದಲವನ್ನು ಜೀವಂತವಾಗಿಡಬೇಕೆಂದು ಮತ್ತೆ ಮತ್ತೆ ಸಭೆಗಳನ್ನು ಮಾಡಲು ಮುಂದಾಗಿದ್ದಾರೆ. `ಇದರಿಂದ ಪಕ್ಷಕ್ಕೂ ಹಾನಿ; ನಮಗೂ ಕ್ಷೇತ್ರಗಳಲ್ಲಿ ಸಮಸ್ಯೆ~ ಎಂದು ಹೆಸರು ಹೇಳಲು ಇಚ್ಛಿಸದ ಸಚಿವರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸಚಿವ ಜಗದೀಶ ಶೆಟ್ಟರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎನ್ನುವ ಅವರ ಒಂದು ಬಣದ ಬೇಡಿಕೆಗೂ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಇದು ಕೂಡ ಅವರಿಗೆ ಬೇಸರ ತಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಪಕ್ಷ ತ್ಯಜಿಸುವುದು ಅವರ ಆಪ್ತರೊಬ್ಬರಿಗೆ ಬಿಟ್ಟರೆ ಬೇರೆ ಯಾರಿಗೂ ಇಷ್ಟ ಇಲ್ಲ. ಸಚಿವರು, ಶಾಸಕರು ಪಕ್ಷ ಬಿಡುವ ತೀರ್ಮಾನದಿಂದ ಹಿಂದೆ ಸರಿದಿದ್ದಾರೆ. ಪಕ್ಷದಲ್ಲೇ ಉಳಿದರೆ ಹೋರಾಟಕ್ಕೆ ಬೆಂಬಲಿಸುವ ಭರವಸೆ ನೀಡಿದ್ದಾರೆ.

ಈ ನಡುವೆ ಪಕ್ಷದ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲೂ, `ಪಕ್ಷ ಮತ್ತು ಸರ್ಕಾರ ಉಳಿಸುವ ತೀರ್ಮಾನ ತೆಗೆದುಕೊಳ್ಳಿ~ ಎನ್ನುವ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.