ADVERTISEMENT

ಬಿಎಸ್‌ವೈ ವಿರುದ್ಧದ ಅರ್ಜಿ ವಿಚಾರಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಕೀಲರಾದ ಸಿರಾಜಿನ್ ಬಾಷಾ ಸಲ್ಲಿಸಿರುವ ನಾಲ್ಕನೇ ಖಾಸಗಿ ದೂರಿನ ಸಂಬಂಧ ಅರ್ಜಿದಾರರ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಿದೆ.

ಜನವರಿ 24ರಂದು ಸಲ್ಲಿಸಿದ್ದ ನಾಲ್ಕನೇ ದೂರಿನ ಕುರಿತು `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಸೋಮವಾರ ವಿಚಾರಣೆ ನಡೆಸಿದರು.
`ಈ ಹಿಂದೆಯೇ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉದ್ಯಮಿ ಪ್ರಕಾಶ್ ಶೆಟ್ಟಿ ಒಡೆತನದ ತ್ರಿಶೂಲ್ ಡೆವಲಪರ್ಸ್ ಅನುಕೂಲಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟು ಆದೇಶ ಹೊರಡಿಸಿರುತ್ತಾರೆ. ಅದಕ್ಕೂ ಮುನ್ನ ಬಿಡಿಎ ವಶದಲ್ಲಿದ್ದ ಭೂಮಿಯಲ್ಲಿ ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಇದೇ ಉದ್ಯಮಿಗೆ ಅನುಮತಿ ನೀಡಲಾಗಿತ್ತು. ಕಾನೂನು ಉಲ್ಲಂಘಿಸಿ ಈ ನಿರ್ಧಾರ ಕೈಗೊಂಡಿರುವುದಕ್ಕಾಗಿ ಪ್ರಕಾಶ್ ಶೆಟ್ಟಿ ಅವರಿಂದ ಯಡಿಯೂರಪ್ಪ ಕುಟುಂಬದ ಸದಸ್ಯರ ಸಂಸ್ಥೆಗಳಿಗೆ 2.75 ಕೋಟಿ ಲಂಚ ಸಂದಾಯವಾಗಿದೆ~ ಎಂದು ಮೊದಲನೇ ಪ್ರಕರಣ ಕುರಿತು ವಿವರಿಸಿದರು.

`ಎರಡನೇ ಪ್ರಕರಣ ಬಿಡಿಎ ಸ್ವಾಧೀನದಲ್ಲಿದ್ದ 11.35 ಎಕರೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದಕ್ಕೆ ಸಂಬಂಧಿಸಿದ್ದು. ಭೂಸ್ವಾಧೀನದಿಂದ ಕೈಬಿಡುವ ಮುನ್ನವೇ ಈ ಭೂಮಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಅಬುದಾಬಿಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಅನುಮತಿ ನೀಡಲಾಗಿತ್ತು. ನಂತರ ಅಲ್ಲಿ ವಸತಿ ಯೋಜನೆ ಆರಂಭಿಸುವ ಪ್ರಸ್ತಾವಕ್ಕೆ ಅದೇ ವ್ಯಕ್ತಿಗೆ ಅನುಮತಿ ನೀಡಲಾಯಿತು. ಬಳಿಕ 11.35 ಎಕರೆಯನ್ನು ಭೂಸ್ವಾಧೀನದಿಂದ ಕೈಬಿಟ್ಟಿದ್ದು, ಅದರಲ್ಲಿ 2.35 ಎಕರೆ ಭೂಮಿಯನ್ನು ಬಿ.ಎಸ್.ಅರುಣ್‌ಕುಮಾರ್ ಎಂಬುವರು ಪಡೆದಿದ್ದಾರೆ. ಈ ವ್ಯಕ್ತಿ ಯಡಿಯೂರಪ್ಪ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಡೆವಲಪರ್ಸ್‌ನ ಪ್ರಮುಖ ಷೇರುದಾರರಲ್ಲಿ ಒಬ್ಬ~ ಎಂದರು.

ADVERTISEMENT

`ಬೆಂಗಳೂರಿನ ರಾಜಮಹಲ್ ವಿಲಾಸ್ ಎರಡನೇ ಹಂತದ ಬಡಾವಣೆಯಲ್ಲಿ ಬಿಡಿಎ ಖಾಲಿ ಉಳಿಸಿಕೊಂಡಿದ್ದ ಭೂಮಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ನಿವೇಶನ ನೀಡುವುದಕ್ಕಾಗಿಯೇ ನಾಲ್ಕು ನಿವೇಶನಗಳ ಚಿಕ್ಕ ಬಡಾವಣೆ ನಿರ್ಮಿಸಲಾಯಿತು. ನಂತರ ಒಂದು ನಿವೇಶನವನ್ನು ರಾಘವೇಂದ್ರ ಅವರಿಗೆ ಮುಖ್ಯಮಂತ್ರಿಯವರ ವಿವೇಚನಾ ಕೋಟಾದಡಿ ನೀಡಲಾಗಿದೆ. ಮತ್ತೊಂದು ನಿವೇಶನವನ್ನು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರಿಗೆ ನೀಡಲಾಗಿದೆ. ಸುಳ್ಳು ಪ್ರಮಾಣಪತ್ರ ಸಲ್ಲಿಸಿ ಈ ನಿವೇಶನ ಪಡೆದಿದ್ದಾರೆ~ ಎಂದು ಮೂರನೇ ಪ್ರಕರಣದ ಬಗ್ಗೆ ಹೇಳಿಕೆ ನೀಡಿದರು.

ಅರ್ಜಿದಾರರ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಾಧೀಶರು ವಿಚಾರಣೆಯನ್ನು ಅ. 20ಕ್ಕೆ ಮುಂದೂಡಿದರು. ಯಡಿಯೂರಪ್ಪ ವಿರುದ್ಧ ಸಲ್ಲಿಸಿರುವ ಐದನೇ ಖಾಸಗಿ ದೂರಿನ ವಿಚಾರಣೆಯೂ ಇದೇ ದಿನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.