ADVERTISEMENT

ಬಿಎಸ್‌ವೈ ಹುಟ್ಟೂರಲ್ಲಿ ಅಘೋಷಿತ ಬಂದ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2011, 19:30 IST
Last Updated 16 ಅಕ್ಟೋಬರ್ 2011, 19:30 IST

ಕೃಷ್ಣರಾಜಪೇಟೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು  ಶನಿವಾರ ಬಂಧಿಸಿರುವುದರಿಂದ ಅವರಹುಟ್ಟೂರು ಬೂಕನಕೆರೆಯಲ್ಲಿ ಭಾನುವಾರ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ಗ್ರಾಮದಲ್ಲಿ ಜನ ಮತ್ತು ವಾಹನ ಸಂಚಾರ ವಿರಳವಾಗಿತ್ತು. ಅಂಗಡಿ-ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಊರಿನ ಮಗನಿಗೆ ಬಂದ ದುರ್ದೆಸೆಯನ್ನು ನೆನೆದು ಜನರು ಮರುಗುತ್ತಿದ್ದುದು ಸಾಮಾನ್ಯವಾಗಿತ್ತು. ಯಡಿಯೂರಪ್ಪ ಆರೋಪ ಮುಕ್ತರಾಗಿ ಹೊರಬರಲಿ ಎಂದು ಜನರು ಪ್ರಾರ್ಥಿಸುತ್ತಿದ್ದರು.

ಇಂದು ಶಿಕಾರಿಪುರ ಬಂದ್?
ಶಿಕಾರಿಪುರ ವರದಿ:
ಬಿ.ಎಸ್.ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಸೋಮವಾರ ಸ್ವಯಂಪ್ರೇರಿತ ಬಂದ್ ಅಚರಿಸುವಂತೆ ಅಭಿಮಾನಿಗಳು ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪುರಸಭೆ ಅಧ್ಯಕ್ಷ ವೇಣು ಮಲ್ಲೇಶ್ ಅವರು ಖುದ್ದು ಶಿಕಾರಿಪುರ ಪಟ್ಟಣದ ಹೋಟೆಲ್‌ಗಳಿಗೆ ತೆರಳಿ, ಸ್ವಯಂಪ್ರೇರಿತರಾಗಿ ಬಂದ್ ನಡೆಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಬಂದ್‌ಗೆ ತಾವು ಕರೆ ನೀಡಿಲ್ಲ ಎಂದು ವೇಣು ಮಲ್ಲೇಶ್ ಸ್ಪಷ್ಟಪಡಿಸಿದ್ದಾರೆ.

ಶಿಕಾರಿಪುರ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಬೀಟ್ ಪೊಲೀಸರು ಸೋಮವಾರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಜನರಿಗೆ ಎಚ್ಚರಿಸುತ್ತಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ರುದ್ರಾಭಿಷೇಕ (ಹೊನ್ನಾಳಿ ವರದಿ): ಯಡಿಯೂರಪ್ಪ ಅವರು ನ್ಯಾಯಾಂಗ ಬಂಧನದಿಂದ ಬಿಡುಗಡೆ ಆಗಬೇಕು ಮತ್ತು ನಿರ್ದೋಷಿ ಎಂದು ಸಾಬೀತಾಗಬೇಕು ಎಂದು ಪ್ರಾರ್ಥಿಸಿ ಪಟ್ಟಣದ ಹಿರೇಕಲ್ಮಠದಲ್ಲಿ  ಅ. 17ರಂದು ತಾಲ್ಲೂಕು ಬಿಜೆಪಿ ವತಿಯಿಂದ ರುದ್ರಾಭಿಷೇಕ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಿಗ್ಗೆ 10ಕ್ಕೆ ಕ್ಷೇತ್ರನಾಥ ಚನ್ನಪ್ಪ ಸ್ವಾಮಿಗೆ ರುದ್ರಾಭಿಷೇಕ-ಪೂಜೆ ನೆರವೇರಿಸಲಾಗುವುದು. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸಿದ್ದಪಾದ ಶಿವಾಚಾರ್ಯ ಸ್ವಾಮೀಜಿ ಇತರರು ಉಪಸ್ಥಿತರಿರುವರು ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.