ADVERTISEMENT

`ಬಿಜೆಪಿಗೆ ನಷ್ಟವಿಲ್ಲ'

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2012, 20:33 IST
Last Updated 30 ನವೆಂಬರ್ 2012, 20:33 IST
`ಬಿಜೆಪಿಗೆ ನಷ್ಟವಿಲ್ಲ'
`ಬಿಜೆಪಿಗೆ ನಷ್ಟವಿಲ್ಲ'   

ಶಿವಮೊಗ್ಗ: ಯಡಿಯೂರಪ್ಪ ಬಿಜೆಪಿ ಬಿಡುತ್ತಿರುವುದರಿಂದ ವೈಯಕ್ತಿಕವಾಗಿ ಅವರಿಗೆ ಅಪಾರ ನಷ್ಟ, ಬಿಜೆಪಿಗೆ ನಷ್ಟ ಅಲ್ಪ. ಆದರೆ, ಪಕ್ಷವನ್ನು ಅವರ ಹತ್ತರಪಟ್ಟು ಶ್ರಮ ಹಾಕಿ ಬೆಳೆಸಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿಯೂ ಆದ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದು' ಎಂಬ ನಿಲುವು ಬಿಜೆಪಿಯದ್ದು. ಈ ಹಿಂದೆ ಕಲ್ಯಾಣಸಿಂಗ್, ಉಮಾ ಭಾರತಿ, ಎ.ಕೆ. ಸುಬ್ಬಯ್ಯ ಅಂತಹವರು ಪಕ್ಷ ಬಿಟ್ಟು ಹೋಗಿದ್ದರು. ಆದರೆ, ಅವರ‌್ಯಾರು ಯಶಸ್ವಿಯಾಗಲಿಲ್ಲ. ಅವರು ತೊರೆದು ಹೋಗಿದ್ದರಿಂದ ಬಿಜೆಪಿ ನಾಶವಾಗಿಲ್ಲ ಎಂದು ಈಶ್ವರಪ್ಪ ಸೂಚ್ಯವಾಗಿ ಹೇಳಿದರು.

ಹುಸಿಯಾದ ನಿರೀಕ್ಷೆ: ಈ ಹಿಂದೆ ಎರಡು ಬಾರಿ ಯಡಿಯೂರಪ್ಪ ಪಕ್ಷ ಬಿಡಲು ನಿರ್ಧರಿಸಿದ್ದರು. ಕೊನೆ ಗಳಿಗೆಯಲ್ಲಿ ಹಿಂದಕ್ಕೆ ಸರಿದಿದ್ದರು. ಈಗಲೂ ಯಡಿಯೂರಪ್ಪ ಪಕ್ಷದಲ್ಲಿ ಉಳಿಯುತ್ತಾರೆಂಬ ವಿಶ್ವಾಸ ಇತ್ತು. ನಮ್ಮ ನಿರೀಕ್ಷೆ ಸುಳ್ಳಾಗಿದೆ. ಇದುವರೆಗೂ ಅವರು ನಮ್ಮ ನಾಯಕರಾಗಿದ್ದರು. ಇನ್ನು ಮುಂದೆ ಅವರು ನಮ್ಮ ನಾಯಕರಲ್ಲ. ಬಿಜೆಪಿಗೆ ಮತ್ತೆ ಹಿಂದಿರುಗುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಸದ್ಯಕ್ಕಂತೂ ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಇಲ್ಲ ಎಂದರು.

ಸವಾಲಾಗಿ ಸ್ವೀಕಾರ: ಯಡಿಯೂರಪ್ಪ ಯಾವಾಗಲೂ ಪಕ್ಷವನ್ನು ತಾಯಿ ಇದ್ದಂತೆ; ಕಾರ್ಯಕರ್ತರು ದೇವರು ಎನ್ನುತ್ತಿದ್ದರು. ಯಡಿಯೂರಪ್ಪ ತಾಯಿ ಸಮಾನವಾದ ಬಿಜೆಪಿ ತೊರೆದು ಹೋಗುತ್ತಿರುವುದು ಏಕೆ ಎಂಬುವುದು ತಮಗೆ ಗೊತ್ತಾಗುತ್ತಿಲ್ಲ. ಕಾರ್ಯಕರ್ತರಿಗೆ ಈಗ ನೋವು ತಾತ್ಕಾಲಿಕ. ಪಕ್ಷ ತಾಯಿ ಸ್ವರೂಪದಲ್ಲಿರುತ್ತದೆ. ಕಾರ್ಯಕರ್ತರು ಎಂದಿಗೂ ವಿಚಲಿತರಾಗುವುದಿಲ್ಲ. ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿಸಲು ಇದನ್ನೇ ಸವಾಲಾಗಿ ಸ್ವೀಕರಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.