ADVERTISEMENT

ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2013, 9:33 IST
Last Updated 18 ಜನವರಿ 2013, 9:33 IST
ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲ್ಲ: ಯಡಿಯೂರಪ್ಪ
ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲ್ಲ: ಯಡಿಯೂರಪ್ಪ   

ಬೆಂಗಳೂರು (ಪಿಟಿಐ): `ವಿಧಾನಸಭೆ ಚುನಾವಣೆ ನಂತರ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆಯೇ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದರು.

ಇಲ್ಲಿ ನಡೆದ ಕೆಜೆಪಿ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭದ ನಂತರ ವರದಿಗಾರರೊಂದಿಗೆ ಮಾತನಾಡಿದ ಅವರು, `ಕೆಲ ವ್ಯಕ್ತಿಗಳು ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಗುರಿ ಕೆಜೆಪಿ ಸರ್ಕಾರವನ್ನು ರಚಿಸುವುದಾಗಿದೆ. ಯಾವುದೇ ಸಂದರ್ಭದಲ್ಲಿಯೂ ನಮ್ಮ ಪಕ್ಷ ಬಿಜೆಪಿ ಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೇಯೇ ಇಲ್ಲ' ಎಂದು ಹೇಳಿದರು.

ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ನಮ್ಮ ಪಕ್ಷ ಇತರೆ ಯಾವುದೇ ಪಕ್ಷದೊಂದಿಗೆ ಕೈಜೊಡಿಸಿ ಸರ್ಕಾರ ರಚಿಸುವುದಿಲ್ಲ. ದಕ್ಷಿಣ ಭಾರತದಲ್ಲಿಯೇ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮವಹಿಸಿ ಯಶಸ್ವಿಯಾಗಿದ್ದೆ. ಅದರಂತೆಯೇ ಕೆಜೆಪಿಯು ಸಹ ಅಧಿಕಾರಕ್ಕೆ ಬರುವ ನಂಬಿಕೆ ಇದೆ' ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಜ. 23ರ ನಂತರ ರಾಜಕೀಯ ಬದಲಾವಣೆಗಳು ಆಗಬಹುದು. ಬಿಜೆಪಿ ಸರ್ಕಾರ ಅಸ್ಥಿರಗೊಳ್ಳಲು ಬಹುದು ಎಂದು  ಇದೇ ಸಂದರ್ಭದಲ್ಲಿ  ಮತ್ತೊಮ್ಮೆ ಬಿಜೆಪಿ ಸರ್ಕಾರದ ಬಗ್ಗೆ ಭವಿಷ್ಯವನ್ನು ನುಡಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೇ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವಾಗ ನಾವು ಏಕೆ ಅದನ್ನು ಮಾಡಬೇಕು ಎಂದರು.

ಜ. 23ಕ್ಕೆ 20 ಶಾಸಕರು ಮತ್ತು ನಾಲ್ಕು ಸಚಿವರು ಕೆಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂದು ನಿಮ್ಮ ಬೆಂಬಲಿಗರಾದ ನೇಹರು ಓಲೆಕರ್ ಅವರು ಹೇಳಿದ್ದಾರಲ್ಲ ಎಂದು ವರದಿಗಾರರು ಪ್ರಶ್ನಿಸಿದಾಗ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಯಡಿಯೂರಪ್ಪ ನುಣುಚಿಕೊಂಡರು.

ಕೆಜೆಪಿ ಪಕ್ಷವನ್ನು ಸೇರುವ ಬಗ್ಗೆ ಬಿಜೆಪಿ ಶಾಸಕರಿಗೆ ಹಾಗೂ ಸಚಿವರಿಗೆ ಯಾವುದೇ ಗಡುವು ನೀಡುವುದಿಲ್ಲ. ಕೆಜೆಪಿ ಪಕ್ಷವನ್ನು ಸೇರಲು ಇಚ್ಚಿಸುವವರು ಸಂತೋಷದಿಂದ ಪಕ್ಷಕ್ಕೆ ಸೇರಬಹುದು. ಒಂದು ವೇಳೆ ಬಿಜೆಪಿ ಪಕ್ಷದಲ್ಲಿಯೇ ಅವರಿಗೆ ಸುರಕ್ಷತೆ ಇದ್ದಲ್ಲಿ ಅಲ್ಲಿಯೇ ಅವರು ಇರಬಹುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.