ADVERTISEMENT

ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 19:30 IST
Last Updated 29 ಫೆಬ್ರುವರಿ 2012, 19:30 IST
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ   

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಾರ್ಕಳದ ವಿ.ಸುನೀಲ್ ಕುಮಾರ್ ಬುಧವಾರ ಚುನಾವಣಾಧಿಕಾರಿ ಎಂ.ಟಿ.ರೇಜು ಅವರಿಗೆ ಮತ್ತೆ ಬುಧವಾರ ನಾಮಪತ್ರ ಸಲ್ಲಿಸಿದರು.

ಮಣಿಪಾಲದ ರಜತಾದ್ರಿಯಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಬಂದ ಸುನೀಲ್ ಕುಮಾರ್ ಬೆಳಿಗ್ಗೆ 11.15ಕ್ಕೆ ಎರಡನೇ ನಾಮಪತ್ರ ಸಲ್ಲಿಸಿದರು. ಈ ಮೊದಲೇ ಫೆ. 25ರಂದೇ ಒಳ್ಳೆಯ ಮುಹೂರ್ತ ಎಂಬ ಕಾರಣಕ್ಕೆ ನಾಮಪತ್ರ ಸಲ್ಲಿಸಿದ್ದರು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ರಾಜ್ಯ ಘಟಕ ಅಧ್ಯಕ್ಷ  ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಇದ್ದರು.

ಮುಖ್ಯಮಂತ್ರಿ ವಿಶ್ವಾಸ: ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸದಾನಂದ ಗೌಡ, `ಈ ಚುನಾವಣೆ ರಾಜ್ಯ ರಾಜಕೀಯಕ್ಕೆ ಹೊಸ ದಿಕ್ಸೂಚಿಯಾಗಲಿದೆ.  ಮುಖ್ಯಮಂತ್ರಿ ತವರು ಕ್ಷೇತ್ರವಾದ ಕಾರಣ ಪಕ್ಷಕ್ಕೆ ಈ ಚುನಾವಣೆ ಬಹಳ ಮುಖ್ಯವಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ಏಳು ಶಾಸಕರಿದ್ದು, ಗೆಲುವು ಕಷ್ಟವಲ್ಲ ಎಂದರು.

ಯಡಿಯೂರಪ್ಪ ಗೈರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವರು ಬಂದಿಲ್ಲ, ಇವರು ಬಂದಿಲ್ಲ ಎಂದೆಲ್ಲ ಪ್ರಶ್ನಿಸದಿರಿ. ನಾವೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ಸಾಮೂಹಿಕ ನಾಯಕತ್ವದಲ್ಲಿಯೇ ಚುನಾವಣೆ ಎದುರಿಸುತ್ತೇವೆ~ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

`ಇಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿದ್ದರು. ಠೇವಣಿ ಕಳೆದುಕೊಳ್ಳುವ ಭೀತಿಯಿಂದ ಆ ಕೆಲಸ ಮಾಡಿಲ್ಲ~ ಎಂದು ಲೇವಡಿ ಮಾಡಿದ ಈಶ್ವರಪ್ಪ, `ನಮ್ಮ ಪಕ್ಷ ಒಗ್ಗಟ್ಟಾಗಿದೆ ಎನ್ನುವುದನ್ನು ಈ ಚುನಾವಣೆಯಲ್ಲಿ ಗೆದ್ದು ತೋರಿಸುತ್ತೇವೆ~ ಎಂದರು.

ಮನೋರಮಾ ಪುನರಾಗಮನ: ಮಾಜಿ ಸಂಸದೆ ಮನೋರಮಾ ಮಧ್ವರಾಜ್ ಬುಧವಾರ ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷಕ್ಕೆ ಮರಳಿದರು. 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಮುನಿದು ಬಿಜೆಪಿ ಸೇರಿ ಸ್ಪರ್ಧಿಸಿದ್ದ ಅವರು, ಕಾಂಗ್ರೆಸ್‌ನ ವಿನಯ ಕುಮಾರ್ ಸೋರಕೆ ವಿರುದ್ಧ ಗೆದ್ದಿದರು.

2008ರಲ್ಲಿ ಸಂಸತ್‌ನಲ್ಲಿ ಅಣು ಒಪ್ಪಂದದ ಪರ ನಿಲುವು ತಳೆಯುವ ಮೂಲಕ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನು ಬೆಂಬಲಿಸಿದ್ದರು. ಬಳಿಕ ಬಿಜೆಪಿಯಿಂದ ಅವರನ್ನು ಉಚ್ಚಾಟಿಸಲಾಗಿತ್ತು. 2009ರ ಜ. 21ರಂದು ನವದೆಹಲಿಯಲ್ಲಿ ಸೋನಿಯಾ ಗಾಂಧಿ ಸಮ್ಮುಖ ಮತ್ತೆ ಕಾಂಗ್ರೆಸ್ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.