ADVERTISEMENT

ಬಿಜೆಪಿ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸುತ್ತೀರಾ?: ವಿನಾಯಕ ಬಾಳಿಗ ಕುಟುಂಬ

​ಪ್ರಜಾವಾಣಿ ವಾರ್ತೆ
Published 7 ಮೇ 2018, 14:51 IST
Last Updated 7 ಮೇ 2018, 14:51 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಮಂಗಳೂರು: ‘2016ರಲ್ಲಿ ಕೊಲೆಯಾದ ವಿನಾಯಕ ಬಾಳಿಗ ಬಿಜೆಪಿ ಕಾರ್ಯಕರ್ತನಾಗಿರಲಿಲ್ಲವೇ? ಬಿಜೆಪಿಗಾಗಿ ನಿರಂತರವಾಗಿ ದುಡಿದ ಆತನ ಕೊಲೆ ಪ್ರಕರಣದಲ್ಲಿ ನ್ಯಾಯ ದೊರಕಿಸಲು ನಮ್ಮ ಬೆಂಬಲಕ್ಕೆ ನಿಲ್ಲುತ್ತೀರಾ’ ಎಂದು ವಿನಾಯಕ ಬಾಳಿಗ ಕುಟುಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಪ್ರಶ್ನಿಸಿದೆ.

‘ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಡಿ.ವೇದವ್ಯಾಸ ಕಾಮತ್‌ ಮತ್ತು ಅವರ ನಿಕಟವರ್ತಿ ನರೇಶ್‌ ಶೆಣೈ ಕೊಲೆಯಲ್ಲಿ ಭಾಗಿಯಾಗಿರುವ ಸಂಶಯವಿದೆ. ನರೇಶ್‌ ಶೆಣೈವರೆಗೆ ಮಾತ್ರ ತನಿಖೆ ನಡೆದಿದೆ. ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ತನಿಖೆ ನಡೆಸಬೇಕು’ ಎಂದು ಕುಟುಂಬ ಪತ್ರದಲ್ಲಿ ಆಗ್ರಹಿಸಿದೆ.

ಬಾಳಿಗ ಅವರ ಮನೆಯ ಆವರಣದಲ್ಲಿ ಸೋಮವಾರ ರಾಷ್ಟ್ರಪ್ರೇಮಿ ಸಂಘಟನೆಗಳ ಒಕ್ಕೂಟದ ಪ್ರೊ.ನರೇಂದ್ರ ನಾಯಕ್‌ ಮತ್ತು ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಸಂಚಾಲಕ ರಘು ಎಕ್ಕಾರ್‌ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ವಿನಾಯಕ ಬಾಳಿಗ ಅವರ ತಂದೆ ರಾಮಚಂದ್ರ ಬಾಳಿಗ ಮತ್ತು ಸಹೋದರಿಯರಾದ ಶ್ವೇತಾ, ಉಷಾ, ಅನುರಾಧಾ ಮತ್ತು ಹರ್ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಬರೆದಿರುವ ಪತ್ರವನ್ನು ಬಿಡುಗಡೆ ಮಾಡಿದರು.

ADVERTISEMENT

‘ನೀವು ಚುನಾವಣಾ ಪ್ರಚಾರದುದ್ದಕ್ಕೂ ಬಿಜೆಪಿ ಕಾರ್ಯಕರ್ತರ ಕೊಲೆ ವಿಚಾರ ಪ್ರಸ್ತಾಪಿಸುತ್ತಿದ್ದೀರಿ. ವಿನಾಯಕ ಬಾಳಿಗ ಕೊಲೆ ಬಗ್ಗೆ ಏಕೆ ಮಾತನಾಡುತ್ತಿಲ್ಲ ವಿನಾಯಕ ಬಾಳಿಗ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದರೂ ಅವರ ಕೊಲೆ ವಿಚಾರದಲ್ಲಿ ನಿಮ್ಮ ಪಕ್ಷ ಏಕೆ ಪ್ರತಿಭಟನೆ ನಡೆಸಿಲ್ಲ. ಸಂಸದ ನಳಿನ್‌ಕುಮಾರ್‌ ಕಟೀಲ್‌ ಸೇರಿದಂತೆ ಪಕ್ಷದ ಯಾವೊಬ್ಬ ನಾಯಕರೂ ನಮ್ಮ ಕುಟುಂಬದವರನ್ನು ಭೇಟಿಮಾಡಿ ಸಾಂತ್ವನ ಹೇಳದಿರುವುದಕ್ಕೆ ಕಾರಣವೇನು’ ಎಂದು ಪತ್ರದಲ್ಲಿ ಪ್ರಶ್ನಿಸಲಾಗಿದೆ.

‘ಬಿಜೆಪಿ ಮಹಿಳಾ ಮೋರ್ಚಾ ಸಂಚಾಲಕಿ ಮೀನಾಕ್ಷಿ ಲೇಖಿ ಅವರ ಗಮನಕ್ಕೆ ಈ ವಿಚಾರ ತರಲು ಯತ್ನಿಸಿದಾಗ, ಇದು ಸ್ಥಳೀಯ ವಿಚಾರವಾಗಿದ್ದು ಅಲ್ಲಿಯೇ ಮಾತನಾಡಿ ಎಂದರು. ಸ್ಥಳೀಯ ಸಂಸದರ ಬಳಿ ಚರ್ಚೆಗೆ ಹೋದಾಗ ಅವರೇಕೆ ನಮ್ಮನ್ನು ದೂರ ಸರಿಸಿ ಹೊರಟು ಹೋದರು. ಮಹಿಳೆಯರಿಗೆ ತುಂಬಾ ಗೌರವ ನೀಡುತ್ತಿರುವುದಾಗಿ ನಿಮ್ಮ ಪಕ್ಷ ಹೇಳುತ್ತಿದೆ. ನಾವು ನಾಲ್ವರು ಸಹೋದರಿಯರು ಮತ್ತು 88 ವರ್ಷ ವಯಸ್ಸಿನ ತಂದೆ ವಿನಾಯಕ ಬಾಳಿಗ ಕೊಲೆಗೆ ನ್ಯಾಯ ಪಡೆಯಲು ಹೋರಾಡುತ್ತಿದ್ದೇವೆ. ನಮ್ಮ ಕಡೆಗೆ ನಿಮ್ಮ ಅನುಕಂಪ ಏಕಿಲ್ಲ. ನಮಗೆ ಸಹಾಯ ಮಾಡಲು ಏನು ಮಾಡುತ್ತೀರಿ’ ಎಂದು ಕೇಳಿದ್ದಾರೆ.

‘ನಿಮ್ಮ ಪಕ್ಷ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ನಮ್ಮ ಅಣ್ಣನ ಕೊಲೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ನೇಮಿಸುತ್ತೀರಾ? ಪ್ರಮುಖ ಆರೋಪಿ ನರೇಶ್‌ ಶೆಣೈ ಮಂಪರು ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುತ್ತೀರಾ? ಬಿಜೆಪಿ ಅಧ್ಯಕ್ಷರಾಗಿ ನಮಗೆ ಸಹಾಯ ಮಾಡಲು ಯಾವ ಕ್ರಮ ಜರುಗಿಸುತ್ತೀರಿ’ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅನುರಾಧಾ ಬಾಳಿಗ, ‘ವೆಂಕಟರಮಣ ದೇವಸ್ಥಾನ ಮತ್ತು ಕಾಶಿ ಮಠದಲ್ಲಿನ ಅವ್ಯವಹಾರ ಪ್ರಶ್ನಿಸಿದ್ದಕ್ಕಾಗಿಯೇ ಅಣ್ಣನ ಕೊಲೆ ನಡೆದಿದೆ. ಈ ಪ್ರಕರಣದಲ್ಲಿ ವೇದವ್ಯಾಸ ಕಾಮತ್‌ ಮಾತ್ರವಲ್ಲ ಕಾಶಿ ಮಠದ ಸ್ವಾಮೀಜಿಯ ಬಗ್ಗೆಯೂ ನಮಗೆ ಅನುಮಾನವಿದೆ. ಅವರನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.