ADVERTISEMENT

ಬಿಜೆಪಿ ಕೋರ್ ಕಮಿಟಿ ಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST
ಬಿಜೆಪಿ ಕೋರ್ ಕಮಿಟಿ ಸಭೆ ರದ್ದು
ಬಿಜೆಪಿ ಕೋರ್ ಕಮಿಟಿ ಸಭೆ ರದ್ದು   

ಬೆಂಗಳೂರು: ಆಡಳಿತಾರೂಢ ಬಿಜೆಪಿಯಲ್ಲಿನ ಅಂತಃಕಲಹ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಶನಿವಾರ ನಡೆಯಬೇಕಾಗಿದ್ದ `ಕೋರ್ ಕಮಿಟಿ~ ಸಭೆಯನ್ನು ಪಕ್ಷದ ಹೈಕಮಾಂಡ್ ರದ್ದು ಮಾಡಿದೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಗೊಂದಲ ಮಾಡಿಕೊಳ್ಳುವುದು ಬೇಡ ಎಂದು ಈ ನಿರ್ಧಾರಕ್ಕೆ ಬರಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕಳೆದ ವಾರ ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇದೇ 3ರಂದು ಕೋರ್ ಕಮಿಟಿ ಸಭೆ ನಡೆಸಲಾಗುವುದು ಎಂದು ಹೇಳಿದ್ದರು. ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೋರ್ ಕಮಿಟಿಯ ಇತರೆ ಸದಸ್ಯರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ಶುಕ್ರವಾರ ಬೆಳಿಗ್ಗೆ ಪಕ್ಷದ ವರಿಷ್ಠರ ಕಡೆಯಿಂದ ಸಭೆ ರದ್ದಾದ ಬಗ್ಗೆ ಮಾಹಿತಿ ಬಂದಿದೆ. ದೆಹಲಿಗೆ ತೆರಳಬೇಕಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇತರರು ಈ ಹಿನ್ನೆಲೆಯಲ್ಲಿ ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಯಡಿಯೂರಪ್ಪ, `ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶನಿವಾರ ಲೋಕಾಯುಕ್ತ ಕೋರ್ಟ್ ಮುಂದೆ ಹಾಜರಾಗಬೇಕಾಗಿದೆ. ಹೀಗಾಗಿ ಕೋರ್ ಕಮಿಟಿ ಸಭೆಗೆ ಬರಲು ಸಾಧ್ಯ ಇಲ್ಲ~ ಎಂದು ತಿಳಿಸಿದ್ದರು. ಈ ಕುರಿತು ಪ್ರಧಾನ್ ಅವರು ಈಶ್ವರಪ್ಪ ಅವರಿಗೆ ಮಾಹಿತಿ ನೀಡಿದರು. ನಂತರ ಎಲ್ಲರೂ ಪರಸ್ಪರ ಚರ್ಚೆ ಮಾಡಿಕೊಂಡು ಉದ್ದೇಶಿತ ಸಭೆಯನ್ನು ರದ್ದು ಮಾಡಿದರು ಎನ್ನಲಾಗಿದೆ.

ಇದಲ್ಲದೆ, ಇದೇ 18ರಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕೋರ್ ಕಮಿಟಿ ಸಭೆ ಮಾಡಿ ಯಡಿಯೂರಪ್ಪ ಅವರನ್ನು ಮತ್ತಷ್ಟು ಮುನಿಸಿಕೊಳ್ಳುವಂತೆ ಮಾಡುವುದು ಬೇಡ ಎನ್ನುವುದು ಕೂಡ ಸಭೆ ರದ್ದು ಮಾಡಲು ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೋರ್ ಕಮಿಟಿ ಸಭೆ ಸೇರಿದ ನಂತರ ರಾಜ್ಯದ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಆರೋಪ ಮುಕ್ತರಾಗುವವರೆಗೂ ನಾಯಕತ್ವ ಬದಲಾವಣೆ ಇಲ್ಲ ಎಂದು ಗಡ್ಕರಿ ಅವರೇ ಸ್ಪಷ್ಟವಾಗಿ ಹೇಳಿದ ನಂತರ ಮತ್ತೆ ಸಭೆಯಲ್ಲಿ ಹೊಸದಾಗಿ ನಿರ್ಧರಿಸುವುದು ಏನೂ ಇಲ್ಲ. ಹೀಗಾಗಿ ಸದ್ಯಕ್ಕೆ ಸಭೆ ರದ್ದು ಮಾಡಿ, ಚುನಾವಣೆ ನಂತರ ಮತ್ತೆ ದಿನಾಂಕ ನಿಗದಿ ಮಾಡೋಣ ಎನ್ನುವ ತೀರ್ಮಾನಕ್ಕೆ ಪಕ್ಷದ ವರಿಷ್ಠರು ಬಂದಿದ್ದಾರೆ ಎಂದು ಗೊತ್ತಾಗಿದೆ.

ಚುನಾವಣೆ ಮುಗಿದ ಕೂಡಲೇ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಆ ಸಂದರ್ಭದಲ್ಲಿ ಕೋರ್ ಕಮಿಟಿ ಸಭೆ ನಡೆಸುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಈ ತಿಂಗಳಲ್ಲಿ ಸಭೆ ಸೇರುವ ಸಾಧ್ಯತೆಗಳು ಕಡಿಮೆ.

ಬಜೆಟ್ ಅಧಿವೇಶನ ನಂತರ ಸಭೆ ಕರೆದು ಯಡಿಯೂರಪ್ಪ ಅವರನ್ನು ಸಮಾಧಾನಪಡಿಸುವ ಯೋಚನೆ ಹೈಕಮಾಂಡ್‌ಗೆ ಇದ್ದಂತಿದೆ. ಅಲ್ಲಿಯವರೆಗೂ ಗೊಂದಲ ಮಾಡಿಕೊಳ್ಳುವುದು ಬೇಡ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಬಿಎಸ್‌ವೈ ಸಭೆ ರದ್ದು: ಯಡಿಯೂರಪ್ಪ ಶುಕ್ರವಾರ ಸಂಜೆ ನಡೆಸಬೇಕಿದ್ದ ತಮ್ಮ ಆಪ್ತರ ಸಭೆಯನ್ನು ವಕೀಲರ ದಾಂಧಲೆ ಹಿನ್ನೆಲೆಯಲ್ಲಿ ರದ್ದು ಮಾಡಿದರು. ಏಟ್ರಿಯಾ ಹೋಟೆಲ್‌ನಲ್ಲಿ ಸಭೆ ಸೇರಿ, ಇದೇ 11ರಂದು ಹುಬ್ಬಳ್ಳಿಯಲ್ಲಿ ನಡೆಯುವ ಸಮಾರಂಭ ಕುರಿತು ಚರ್ಚಿಸಬೇಕಿತ್ತು. ಅದರ ನಂತರ ರಾಜ್ಯ ಪ್ರವಾಸ ಮಾಡುವ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳುವುದಿತ್ತು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.