ಶಿವಮೊಗ್ಗ : ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಪಕ್ಷದ ಮುಖಂಡರು ಹಾಗೂ ಶಾಸಕರ ಮೇಲೆ ಶಿಸ್ತಿನ ಕ್ರಮಕ್ಕೆ ಮುಂದಾದಲ್ಲಿ ಸರ್ಕಾರ ಉಳಿಯುವುದು ಕಷ್ಟ. ಹಾಗಾಗಿ, ಇಂದು ಶಿಸ್ತು ಕ್ರಮಕ್ಕಿಂತ ಸರ್ಕಾರದ ಉಳಿವು ಅನಿವಾರ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯ ಅಧ್ಯಕ್ಷರೂ ಆದ ಕೆ.ಎಸ್. ಈಶ್ವರಪ್ಪ ಒಪ್ಪಿಕೊಂಡರು.
ನಗರದಲ್ಲಿ ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಎದುರಾದ ಪ್ರಶ್ನೆಯೊಂದಕ್ಕೆ `ಸರ್ಕಾರ ಬೀಳೋದು ನಿಮಗಿಷ್ಟವೇ~ ಎಂದು ಮರುಪ್ರಶ್ನೆಯನ್ನು ಹಾಕುವ ಮೂಲಕ ಪತ್ರಕರ್ತರ ಪ್ರಶ್ನೆಗೆ ಈ ಸ್ಪಷ್ಟನೆ ನೀಡಿದರು.
ರಾಜ್ಯದ ಜನತೆ ಪೂರ್ಣಾವಧಿ ಅಧಿಕಾರ ನಡೆಸಿ ಎಂದು ಆಶೀರ್ವದಿಸಿದರು. ಆದರೆ, ಪೂರ್ಣ ಬಹುಮತ ನೀಡಲಿಲ್ಲ. ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿದ್ದಿದ್ದಲ್ಲಿ ಈ ಪ್ರಶ್ನೆಗಳೇ ಉದ್ಭವಿಸುತ್ತಿರಲಿಲ್ಲ ಎಂದು ಉತ್ತರಿಸಿದರು.
ಕಾಂಗ್ರೆಸ್, ಜೆಡಿಎಸ್‌ಗಳಲ್ಲಿ ಭಿನ್ನಾಭಿಪ್ರಾಯಗಳು ತಾರಕಕ್ಕೇರಿ ಪಕ್ಷಗಳೇ ಒಡೆದು ಹೋದುದನ್ನು ಕಾಣುತ್ತೇವೆ.
ಆದರೆ, ನಮ್ಮಲ್ಲಿ ಏನೇ ಭಿನ್ನಾಭಿಪ್ರಯಗಳಿದ್ದಾಗ್ಯೂ ಒಟ್ಟಾಗಿದ್ದೇವೆ. ಪಕ್ಷವನ್ನು ಒಡೆದುಕೊಳ್ಳುವ ಹಂತಕ್ಕೆ ನಾವೆಂದೂ ತಲುಪಿಲ್ಲ. ರಾಷ್ಟ್ರ ನಾಯಕರ ಮಾರ್ಗದರ್ಶನವಿದೆ ಎಂದು ಆತ್ಮವಿಶ್ವಾಸ ಪ್ರದರ್ಶಿಸಿದರು.
ಪಕ್ಷದಲ್ಲಿ ಈಗ ಯಾವುದೇ ಗೊಂದಲವಿಲ್ಲ. ಎಲ್ಲಾ ನಾಯಕರು ಒಟ್ಟಾಗಿ ಕುಳಿತು ಚರ್ಚೆ ಮಾಡಿ, ಸಮಸ್ಯೆ ಪರಿಹಾರ ಮಾಡಿಕೊಂಡಿದ್ದೇವೆ. ಶೇ 90ರಷ್ಟು ಗೊಂದಲ ಪರಿಹಾರವಾಗಿದೆ.
ಕೆಲ ಶಾಸಕರು ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ ಅಷ್ಟೆ. ಅವರೊಂದಿಗೆ ಮಾತನಾಡುತ್ತೇವೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಅಂದೇ ಅಂಗೀಕರಿಸಬೇಕು ಎಂದು ಹಠ ಹಿಡಿದಿದ್ದರಿಂದ ಅಂಗೀಕರಿಸಬೇಕಾಯಿತು. ಆದರೆ, ಅವರು ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್, ಜೆಡಿಎಸ್‌ನಂತೆ ನಮ್ಮದು ಒಡೆದ ಮನೆಯಲ್ಲ. ಬಿಜೆಪಿ ಶಿಸ್ತಿನ ಪಕ್ಷವಾದ ಕಾರಣ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಹೇಳಿದರು.
ಶೆಟ್ಟರ್ ನೇತೃತ್ವದಲ್ಲಿ ಚುನಾವಣೆ: ಡಿವಿಎಸ್
ದಾವಣಗೆರೆ: ರಾಜ್ಯ ಬಿಜೆಪಿಯನ್ನು ಕಾಡುತ್ತಿರುವ ಭಿನ್ನಮತವನ್ನು ಶಮನಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರ ಸುಸೂತ್ರವಾಗಿ ನಡೆಯಲು ನೂತನ ಮುಖ್ಯಮಂತ್ರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಸಾಧ್ಯವಾದರೆ ಮುಂದಿನ ಚುನಾವಣೆಯನ್ನು ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.
ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುವ ಮಾರ್ಗವಾಗಿ ಶನಿವಾರ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಸಾಮೂಹಿಕ ನಾಯಕತ್ವದ ಮೇಲೂ ಚುನಾವಣೆ ಎದುರಿಸುವ ಬಗ್ಗೆಯೂ ಅವರು ಒಲವು ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.