ADVERTISEMENT

ಬಿಜೆಪಿ ಶಾಸಕರಿಗೆ ಚಿನ್ನದ ಬಿಸ್ಕೆಟ್‌ ಬೇಡ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ಬಿಜೆಪಿ ಶಾಸಕರಿಗೆ ಚಿನ್ನದ ಬಿಸ್ಕೆಟ್‌ ಬೇಡ: ಈಶ್ವರಪ್ಪ
ಬಿಜೆಪಿ ಶಾಸಕರಿಗೆ ಚಿನ್ನದ ಬಿಸ್ಕೆಟ್‌ ಬೇಡ: ಈಶ್ವರಪ್ಪ   

ಸಂಡೂರು (ಬಳ್ಳಾರಿ ಜಿಲ್ಲೆ): ವಿಧಾನಸೌಧ ವಜ್ರಮಹೋತ್ಸವ ನೆನಪಿಗಾಗಿ ಶಾಸಕರಿಗೆ ಚಿನ್ನದ ಬಿಸ್ಕೆಟ್‌ ನೀಡುವ ವಿಧಾನಸಭಾಧ್ಯಕ್ಷರ ಪ್ರಸ್ತಾವಕ್ಕೆ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಯಾವ ಶಾಸಕರೂ ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದರು.

ಸಂಡೂರಿನ ಕುಮಾರಸ್ವಾಮಿ ದೇಗುಲಕ್ಕೆ ಮಂಗಳವಾರ ಕುಟುಂಬ ಸಮೇತ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನಾಯಿಗಳನ್ನು ತೃಪ್ತಿಪಡಿಸಲು ಬಿಸ್ಕೆಟ್‌ ನೀಡುತ್ತಾರಾ’ ಎಂದು ವ್ಯಂಗ್ಯವಾಡಿದರು.

‘ರಾಜ್ಯದಲ್ಲಿ ಜನರು ಮಳೆಯಿಂದ ತತ್ತರಿಸಿದ್ದಾರೆ. ಹೀಗಿರುವಾಗ ಶಾಸಕರಿಗೆ ಬಿಸ್ಕೆಟ್ ನೀಡುವುದನ್ನು ನಾವು ವಿರೋಧಿಸುತ್ತೇವೆ. ದುಂದುವೆಚ್ಚ ಮಾಡದಂತೆ ಸಭಾಧ್ಯಕ್ಷರನ್ನು ಕೋರಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಬಿಸ್ಕೆಟ್‌ ಇದ್ದವರೇ ಅಲ್ಲಿದ್ದಾರೆ: ‘ಶಾಸಕರಿಗೆ ಚಿನ್ನದ ಬಿಸ್ಕೆಟ್‌, ಬೆಳ್ಳಿ ನಾಣ್ಯ ಕೊಡಬೇಕಾಗಿಲ್ಲ. ಚಿನ್ನದ ಬಿಸ್ಕೆಟ್‌ ಇರುವ ಶಾಸಕರೇ ಅಲ್ಲಿದ್ದಾರೆ’ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದರು.

‘ರಾಜ್ಯದಲ್ಲಿ ಕೆಲ ದಿನಗಳ ಹಿಂದೆ ಬರ ಇತ್ತು. ಈಗ ಪ್ರವಾಹ ಸ್ಥಿತಿ ಎದುರಾಗಿದೆ. ಹಾಗಾಗಿ ಕಾರ್ಯ
ಕ್ರಮವನ್ನು ಅದ್ಧೂರಿಯಾಗಿ ಮಾಡ
ಬೇಕಿಲ್ಲ. ಹೇಗೆ ಆಚರಣೆ ಮಾಡಬೇಕು ಎಂಬುದನ್ನು ನಿರ್ಧರಿಸಲು ಮುಖ್ಯ
ಮಂತ್ರಿ, ಸ್ಪೀಕರ್‌ ಸೇರಿದಂತೆ ನಾಡಿನ ಗಣ್ಯರನ್ನೊಳಗೊಂಡ ಸಮಿತಿ ರಚಿಸಲಿ’ ಎಂದು ಅವರು ಸಲಹೆ ನೀಡಿದರು.

ಮಹದಾಯಿ ಕಳಸಾ– ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಇದೇ 21ರಂದು ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.