ADVERTISEMENT

ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಬೆಂಗಳೂರು: ಇತರೆ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಶೇಕಡ 27ರಷ್ಟು ಮೀಸಲಾತಿಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಶೇಕಡ 4.5ರಷ್ಟು ಒಳಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಖಂಡನಾ ನಿರ್ಣಯ ಕೈಗೊಂಡಿರುವ ಬಿಜೆಪಿ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾ, `ಇದು ಒಬಿಸಿ ವರ್ಗಗಳ ಬೆನ್ನಿಗೆ ಚೂರಿ ಹಾಕುವಂಥ ಕ್ರಮ~ ಎಂದು ಟೀಕಿಸಿದೆ.

ಇಲ್ಲಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ಒಬಿಸಿ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅನಂತ ಕುಮಾರ್, `4.5ರಷ್ಟು ಒಳಮೀಸಲಾತಿ ಕಲ್ಪಿಸುವ ಕೇಂದ್ರ ಸರ್ಕಾರದ ಆದೇಶವನ್ನು ಪಂಚಾಯಿತಿ ಮಟ್ಟದಲ್ಲಿ ಸುಡುವ ಮೂಲಕ ಪ್ರತಿಭಟಿಸಲಾಗುವುದು~ ಎಂದರು.

ದೇಶದ ಜನಸಂಖ್ಯೆಯಲ್ಲಿ ಒಬಿಸಿ ವರ್ಗಗಳ ಪಾಲು ಶೇಕಡ 54ರಷ್ಟಿದೆ. ಅವರಿಗೆ ನೀಡಿರುವ ಶೇಕಡ 27ರಷ್ಟು ಮೀಸಲಾತಿ ಕಾಂಗ್ರೆಸ್‌ನ ಕೊಡುಗೆ ಅಲ್ಲ. ಇದು ಸಂವಿಧಾನದತ್ತ ಹಕ್ಕು. ಒಬಿಸಿ ವರ್ಗಗಳ ಹಕ್ಕನ್ನೇ ಕಿತ್ತುಕೊಳ್ಳಲು ಹೊರಟಿರುವ ಕಾಂಗ್ರೆಸ್‌ನ ಕ್ರಮವನ್ನು ಬಿಜೆಪಿ ಹಾಗೂ ಎನ್‌ಡಿಎ ಮಿತ್ರಪಕ್ಷಗಳು ಸಂಸತ್ತಿನ ಒಳ, ಹೊರಗೆ ವಿರೋಧಿಸಲಿವೆ ಎಂದು ಹೇಳಿದರು.

`ಬೀದಿಯಲ್ಲಿ ಥಳಿಸುತ್ತಾರೆ~: ಅಲ್ಪಸಂಖ್ಯಾತರ ಮತಗಳಿಸುವ ಉದ್ದೇಶದಿಂದ ಒಬಿಸಿ ವರ್ಗಗಳ ಹಕ್ಕನ್ನು ಕಿತ್ತುಕೊಂಡರೆ ಕಾಂಗ್ರೆಸ್ಸಿಗರಿಗೆ ಜನ ಬೀದಿಯಲ್ಲಿ ಥಳಿಸುತ್ತಾರೆ ಎಂದು ಎಚ್ಚರಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, `ಹಿಂದುಳಿದ ವರ್ಗಕ್ಕೆ ಸೇರಿದ ಕಾಂಗ್ರೆಸ್ ಮುಖಂಡರಾದ ಡಾ.ಜಿ. ಪರಮೇಶ್ವರ್, ಸಿದ್ದರಾಮಯ್ಯ ಮತ್ತು ಮೋಟಮ್ಮ ತಮ್ಮ ಸ್ಥಾನದ  ಆಸೆಯಿಂದ ಒಳಮೀಸಲಾತಿ ವಿಚಾರದಲ್ಲಿ ಒಬಿಸಿ ವರ್ಗಗಳಿಗೆ ಮೋಸ ಮಾಡುತ್ತಿದ್ದಾರೆ~ ಎಂದು ಆರೋಪಿಸಿದರು

  `ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಪಿ.ಸಿ. ಮೋಹನ್ ನೇತೃತ್ವದಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರನ್ನು ವಾರದಲ್ಲಿ ಭೇಟಿ ಮಾಡಲಾಗುವುದು. ಒಳಮೀಸಲಾತಿ ನಿರ್ಧಾರಕ್ಕೆ ಪಕ್ಷದ ವಿರೋಧ ಇರುವುದನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ತಿಳಿಸಬೇಕೆಂದು ಕೋರಲಾಗುತ್ತದೆ~ ಎಂದು ತಿಳಿಸಿದ ಅವರು, ಒಳಮೀಸಲಾತಿ ಅನುಷ್ಠಾನಕ್ಕೆ ಬಂದರೆ ಮುಂದೆ ಆಗುವ ಅನಾಹುತಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದರು.
ಆದೇಶವನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯದಿದ್ದರೆ ಏಪ್ರಿಲ್‌ನಲ್ಲಿ ಮತ್ತೊಮ್ಮೆ ಸಮಾವೇಶ ನಡೆಸಲಾಗುವುದು. ಅದರಲ್ಲಿ 10 ಲಕ್ಷ ಜನರನ್ನು ಸೇರಿಸುವ ಗುರಿ ಇದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್, ಸಚಿವರಾದ ಆರ್. ಅಶೋಕ, ಎಸ್. ಸುರೇಶ್‌ಕುಮಾರ್, ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ, ವರ್ತೂರು ಪ್ರಕಾಶ್, ಆನಂದ ಅಸ್ನೋಟಿಕರ್, ಪಕ್ಷದ ಮುಖಂಡರಾದ ಬಿ.ಜೆ. ಪುಟ್ಟಸ್ವಾಮಿ, ಸುಬ್ಬನರಸಿಂಹ, `ಮುಖ್ಯಮಂತ್ರಿ~ ಚಂದ್ರು, ಚಿತ್ರನಟಿ ತಾರಾ ಇತರರು ಸಮಾವೇಶಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.