ಬೆಂಗಳೂರು: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕಸರತ್ತು ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆಯಿತು. ಬೆಳಿಗ್ಗೆಯಿಂದ ಸಂಜೆವರೆಗೂ ಸುದೀರ್ಘ ಸಭೆಗಳು ನಡೆದವು.
ಮೊದಲು ಪಕ್ಷದ ಪ್ರಮುಖರ ಸಭೆ ನಡೆಯಿತು. ನಂತರ ಚುನಾವಣಾ ಸಮಿತಿ ಸಭೆ ಸೇರಿ ಪ್ರತಿಯೊಂದು ಕ್ಷೇತ್ರದಲ್ಲಿನ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಪರಿಶೀಲನೆ ನಡೆಸಿತು.
ಬುಧವಾರದ ಸಭೆಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಬರಬೇಕಿತ್ತು. ಚುನಾವಣೆ ಘೋಷಣೆಯಾದ ಕಾರಣ ಅವರು ತಮ್ಮ ಪ್ರವಾಸ ರದ್ದುಪಡಿಸಿದರು. ಅವರ ಬದಲಿಗೆ, ಪಕ್ಷದ ರಾಜ್ಯ ಉಸ್ತುವಾರಿ ತಾವರ್‌ಚಂದ್ ಗೆಹ್ಲೋಟ್ ಅವರು ಕೂಡ ಇಡೀ ದಿನ ಸಭೆಗಳಲ್ಲಿ ಭಾಗವಹಿಸಿದ್ದರು.
ಸಭೆ ಮಧ್ಯದಲ್ಲೇ ಹೊರಬಂದ ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ‘21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಅದನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ರವಾನಿಸಲಾಗುವುದು’ ಎಂದು ಹೇಳಿದರು.
ಆರ್.ಅಶೋಕ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿರುವ ಕಾರಣ ಬೆಂಗಳೂರು ಉತ್ತರ ಕ್ಷೇತ್ರದ ಗೊಂದಲ ಬಗೆಹರಿದಂತಾಗಿದ್ದು, ಸದಾನಂದಗೌಡ ಅವರು ಆ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ.
ಗೊಂದಲ ಇರುವ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರ ಜತೆಗೂ ಸಮಿತಿ ಸದಸ್ಯರು ಪ್ರತ್ಯೇಕವಾಗಿ ಚರ್ಚೆ ನಡೆಸಿದರು. ಪೈಪೋಟಿ ಇರುವ ಕಡೆ ಒಮ್ಮತ ಮೂಡಿಸುವ ಪ್ರಯತ್ನ ಕೂಡ ಮಾಡಿದರು ಎಂದು ಗೊತ್ತಾಗಿದೆ.
ಉಡುಪಿ– ಚಿಕ್ಕಮಗಳೂರು ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಹೆಸರು ಅಂತಿಮವಾಗುವುದು ಬಹುತೇಕ ಖಚಿತ. ಶೋಭಾ ಅವರಿಗೆ ಸಿ.ಟಿ.ರವಿ ವಿರೋಧ ವ್ಯಕ್ತಪಡಿಸಿದರೆ, ಡಿ.ಎನ್.ಜೀವರಾಜ್ ಅವರ ಪರ ನಿಂತರು ಎನ್ನಲಾಗಿದೆ. ಇಬ್ಬರನ್ನೂ ಸಮಾಧಾನ ಮಾಡಿ ಶೋಭಾ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.
ಉತ್ತರ ಕನ್ನಡ ಕ್ಷೇತ್ರದಿಂದ ಹಾಲಿ ಸಂಸದರ ಬದಲಿಗೆ ಸಚ್ಚಿದಾನಂದ ಹೆಗಡೆ ಅವರಿಗೆ ಟಿಕೆಟ್ ಕೊಟ್ಟರೆ ಹೇಗೆ ಎಂಬುದರ ಬಗ್ಗೆಯೂ ಚರ್ಚಿಸಲಾಗಿದೆ. ಜಿಲ್ಲಾಧ್ಯಕ್ಷರು ಸಭೆಯಲ್ಲಿ ಇರಲಿಲ್ಲವಾದ ಕಾರಣ ಉತ್ತರ ಕನ್ನಡದ ವಿಷಯವನ್ನು ಅಂತಿಮಗೊಳಿಸಲಿಲ್ಲ ಎನ್ನಲಾಗಿದೆ.
ತುಮಕೂರು, ಬೀದರ್, ಕೊಪ್ಪಳ ಮತ್ತು ಚಿತ್ರದುರ್ಗ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಹೆಸರುಗಳು ಇನ್ನೂ ಅಂತಿಮವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.