ADVERTISEMENT

ಬಿದರಿ ವಿರುದ್ಧ ಎಚ್‌ಡಿಕೆ ಹೇಳಿಕೆಗೆ ತೀವ್ರ ಖಂಡನೆ

​ಪ್ರಜಾವಾಣಿ ವಾರ್ತೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST

ಹಾವೇರಿ: `ನನ್ನ ಸಮಾಜದ ಎಚ್.ಎನ್.ಕೃಷ್ಣ ಅವರಿಗೆ ತೊಂದರೆ ನೀಡಿದ ಶಂಕರ ಬಿದರಿ ನನ್ನ ಕೈಗೆ ಸಿಕ್ಕೇ ಸಿಗುತ್ತಾರೆ. ಅವರು ವೀರಶೈವ ಲಿಂಗಾಯತ ಸಮಾಜಕ್ಕೆ ಸೇರಿದ್ದರೂ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ~ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ  ಅಖಿಲ ಭಾರತ ವೀರಶೈವ ಮಹಾಸಭಾದ 12 ಜಿಲ್ಲೆಗಳ ಮಾಜಿ ಅಧ್ಯಕ್ಷರು ತೀವ್ರವಾಗಿ ಖಂಡಿಸಿದ್ದಾರೆ.

`ಕೃಷ್ಣ ಅವರು ಲೋಕಸೇವಾ ಆಯೋಗದ ಅಧ್ಯಕ್ಷರ ಅವಧಿಯಲ್ಲಿ ಎಸಗಿದ ಅಪರಾಧದ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಒಳಗಾಗಿ ಜೈಲು ಸೇರಿದ್ದಾರೆಯೇ ಹೊರತು ಒಬ್ಬ ಅಧಿಕಾರಿಯ ಹಿತಾಸಕ್ತಿಯಿಂದಲ್ಲ ಎಂಬ ಸಾಮಾನ್ಯ ಜ್ಞಾನವೂ ಮಾಜಿ ಮುಖ್ಯಮಂತ್ರಿಗಿಲ್ಲ~ ಎಂದು   ಹಾವೇರಿಯ ಮಾಜಿ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ 30 ವರ್ಷಗಳಿಂದ ಎಚ್.ಡಿ.ದೇವೆಗೌಡ ಅವರು ವೀರಶೈವ ಲಿಂಗಾಯತ ಸಮಾಜದ ಮೇಲೆ ವಿರೋಧಿ ಧೋರಣೆ ಅನುಸರಿಸುತ್ತಾ ಬಂದಿದ್ದಾರೆ. ಅವರ ಮಕ್ಕಳು ವೀರಶೈವ ಸಮುದಾಯದ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ ಎಂದು ನಾವು ಭಾವಿಸಿದ್ದೆವು. ಆದರೆ, ಅವರು ಇತ್ತೀಚೆಗೆ ಕೋಲಾರದಲ್ಲಿ ಒಕ್ಕಲಿಗ ಸಮಾಜದ ಸಮ್ಮೇಳನದಲ್ಲಿ ಬಿದರಿ  ಅವರ ವಿರುದ್ಧ  ಆಕ್ರೋಶಗೊಂಡು ಮಾತನಾಡಿದ್ದನ್ನು ನೋಡಿದರೇ `ಇವರು ಕೂಡ ತಂದೆಯ ಹಾದಿಯನ್ನೇ ಹಿಡಿದಿರುವುದು ಸ್ಪಷ್ಟವಾಗುತ್ತದೆ~ ಎಂದಿದ್ದಾರೆ.

`ವೀರಶೈವ ಲಿಂಗಾಯತ ಸಮುದಾಯದ ಮುಖ್ಯ ಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್, ಎಸ್.ಆರ್. ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಅವರನ್ನು ತಂದೆ ಮತ್ತು ಮಗ ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬ ವಿಚಾರ ಇಡೀ ರಾಜ್ಯಕ್ಕೇ ಗೊತ್ತಿದೆ. ಈ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಜಾಗೃತಗೊಂಡು ಇಂತಹ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸಬೇಕು~ ಎಂದು ಸಲಹೆ ನೀಡಿದ್ದಾರೆ.

ಬಾಗಲಕೋಟೆಯ ಎಂ.ಎಸ್. ಜಿಗಜಿನ್ನಿ, ವಿಜಾಪುರದ ಸಿದ್ರಾಮಪ್ಪ ಉಪ್ಪಿನ, ಬೆಳಗಾವಿಯ ಬಿ.ವಿ.ಕಟ್ಟಿ, ಕಾರವಾರದ ಶ್ರೀಕಾಂತ ಹೂಲಿ, ಕೊಪ್ಪಳದ ಪರಣ್ಣ ಮುನವಳ್ಳಿ, ಬಳ್ಳಾರಿಯ ಸಾಲಿ ಸಿದ್ಧಯ್ಯಸ್ವಾಮಿ,  ರಾಯಚೂರಿನ ಡಾ.ಎಸ್.ಬಿ. ಅಮರಖೇಡ, ಬೀದರಿನ ವೈಜನಾಥ ಕಮಲಥಾನಿ, ಗುಲ್ಬರ್ಗದ ಬಸವರೆಡ್ಡಿ ಇಟಗಿ, ಧಾರವಾಡದ ಶಿವಣ್ಣ ಬೆಲ್ಲದ, ಗದಗಿನ ಎಸ್.ಬಿ. ಸಂಕಣ್ಣನವರ ಈ ಹೇಳಿಕೆ  ಬೆಂಬಲಿಸಿದ್ದಾರೆ ಎಂದು ಕೋರಿಶೆಟ್ಟರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.