ADVERTISEMENT

ಬಿ.ಪಿ.ರಾಧಾಕೃಷ್ಣ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಬೆಂಗಳೂರು:  `ಪದ್ಮಶ್ರೀ~ ಪುರಸ್ಕೃತ ಭೂವಿಜ್ಞಾನಿ, ಲೇಖಕ ಡಾ. ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣ (95) ಅವರು ಚಾಮರಾಜಪೇಟೆಯ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಗುರುವಾರ ಬೆಳಿಗ್ಗೆ ನಿಧನರಾದರು.

ಮೃತರು ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ವಿಲ್ಸನ್ ಗಾರ್ಡನ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಅಂತ್ಯಕ್ರಿಯೆ ನಡೆಯಲಿದೆ. ಕುಟುಂಬದ ಸದಸ್ಯರನ್ನು ದೂರವಾಣಿ ಸಂಖ್ಯೆ: 080- 26673844 ಮೂಲಕ ಸಂಪರ್ಕಿಸಬಹುದು.

ಬೆಂಗಳೂರಿನಲ್ಲಿ 1918, ಏಪ್ರಿಲ್ 30ರಂದು ಜನಿಸಿದ ರಾಧಾಕೃಷ್ಣ ಅವರು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿ, ಮೈಸೂರು ಭೂವಿಜ್ಞಾನ ಇಲಾಖೆ (ಎಂಜಿಡಿ)ಯಲ್ಲಿ 37 ವರ್ಷಗಳ ಸೇವೆ ಸಲ್ಲಿಸಿದರು.
`ಜಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ~ವನ್ನು ಕಟ್ಟಿ, ಬೆಳೆಸಿದ ಅವರು ಮೈಸೂರು ಖನಿಜ ನಿಗಮದ ಮುಖ್ಯಸ್ಥರಾಗಿ, ಕರ್ನಾಟಕ ಸರ್ಕಾರದ ಅಂತರ್ಜಲ ಸಂಪನ್ಮೂಲಗಳ ಅಭಿವೃದ್ಧಿ ಸಲಹೆಗಾರರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.

ರಾಜ್ಯದಲ್ಲಿನ ಖನಿಜ ಸಂಪನ್ಮೂಲಗಳ ಅಭಿವೃದ್ಧಿ ಹಾಗೂ ಅಂತರ್ಜಲದ ಸಮರ್ಪಕ ಬಳಕೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು `ಕರ್ನಾಟಕದ ಖನಿಜ ಸಂಪತ್ತು~, `ಅಂತರ್ಜಲ~ ಸೇರಿದಂತೆ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಭೂಗರ್ಭದಲ್ಲಿರುವ ನೀರಿನ ಸಂಗ್ರಹ ಹಾಗೂ ನೀರಿನ ಮಹತ್ವವನ್ನು ತಿಳಿಸುವ ಅವರ `ಅಂತರ್ಜಲ~ ಕೃತಿ ಇಂಗ್ಲಿಷ್, ಹಿಂದಿ ಹಾಗೂ ಕನ್ನಡದಲ್ಲಿ ಪ್ರಕಟವಾಗಿದ್ದು ಈಗಾಗಲೆ 25 ಸಾವಿರ ಪ್ರತಿಗಳು ಮಾರಾಟವಾಗಿರುವುದು ವಿಶೇಷ.

ಅಮೆರಿಕ ಹಾಗೂ ಲಂಡನ್ ಸೇರಿದಂತೆ ವಿಶ್ವದಾದ್ಯಂತ ಸಂಚರಿಸಿ ಹಲವು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಖನಿಜ ಸಂಪನ್ಮೂಲ ಹಾಗೂ ಅಂತರ್ಜಲದ ಬಳಕೆ ಬಗ್ಗೆ ಅರಿವು ಮೂಡಿಸಿದ್ದರು.

1991ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅವರ `ಡಾರ್ವಿನ್~ ಹಾಗೂ `ಮೇಡಮ್ ಕ್ಯೂರಿ~ ಕೃತಿಗಳಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.