ADVERTISEMENT

ಬಿಸಿಯೂಟ ಸೇವಿಸಿ 70 ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 21:00 IST
Last Updated 14 ಜೂನ್ 2013, 21:00 IST

ನಂಜನಗೂಡು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ನಂಜನಗೂಡು ತಾಲ್ಲೂಕಿನ ಹಳ್ಳಿದಿಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಧಾಹ್ನ ಬಿಸಿಯೂಟ ಸೇವಿಸಿದ 70 ಮಕ್ಕಳಿಗೆ ವಾಂತಿ, ಹೊಟ್ಟೆನೋವು, ತಲೆಸುತ್ತು- ನೋವು ಕಾಣಿಸಿಕೊಂಡಿದ್ದು, ಎಲ್ಲ ಮಕ್ಕಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

1ರಿಂದ 7ನೇ ತರಗತಿವರೆಗೆ ಒಟ್ಟು 150 ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ 12.30ಕ್ಕೆ ಬಿಸಿಯೂಟವಾಗಿ ಬಿಸಿಬೇಳೆಬಾತ್ ಬಡಿಸಲಾಗಿದೆ. ಮಧ್ಯಾಹ್ನ 3.30ರ ಹೊತ್ತಿಗೆ ಮೊದಲಿಗೆ 4ನೇ ತರಗತಿಯ ಮನೋಜ್ ಎಂಬಾತನಿಗೆ ಶಾಲೆಯಲ್ಲೇ ವಾಂತಿಯಾಯಿತು. ಆಗ ಶಿಕ್ಷಕರು ಆತನನ್ನು ಮನೆಗೆ ಕಳುಹಿಸಿದರು. ಇದಾದ ಬಳಿಕ ಮತ್ತೆ ಕೆಲವರಿಗೆ ವಾಂತಿ, ಹೊಟ್ಟೆನೋವು ಶುರುವಾಗಿದೆ. ಇದರಿಂದ ಗಾಬರಿಗೊಂಡ ಶಿಕ್ಷಕರು ತೊಂದರೆಗೆ ಒಳಗಾದ ಎಲ್ಲ ಮಕ್ಕಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಂಜೆ 4.15ರ ಹೊತ್ತಿಗೆ ದಾಖಲು ಮಾಡಿದರು. ಮನೆಗೆ ತೆರಳಿದ್ದ  ಕೆಲವು ಮಕ್ಕಳೂ ಅಸ್ವಸ್ಥಗೊಂಡ ಕಾರಣ ಪೋಷಕರೇ ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದರು.

ಎಲ್ಲ ಮಕ್ಕಳು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಪಿ.ಎ. ಗೋಪಾಲ್ ತಿಳಿಸಿದ್ದಾರೆ.

`ಅಸ್ವಸ್ಥಗೊಂಡ ಮಕ್ಕಳಲ್ಲಿ ಹೆಚ್ಚಿನವರು 7ನೇ ತರಗತಿಯವರಾಗಿದ್ದಾರೆ. ಬಿಸಿಯೂಟ ತಿಂದ ನಂತರ ಮಕ್ಕಳಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದೆ. ಹಾಗಾಗಿ, ಆಹಾರ ಅಥವಾ ನೀರಿನಲ್ಲಿ ದೋಷ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ನಿಖರ ಕಾರಣ ತಿಳಿಯಲು ಆಹಾರ, ನೀರು, ವಾಂತಿಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. ವರದಿ ಬಂದ ನಂತರ ಕಾರಣ ಏನು ಎಂಬುದು ಗೊತ್ತಾಗುತ್ತದೆ' ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುರುಷೋತ್ತಮ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.