ADVERTISEMENT

ಬೀದರ್ ಕಬ್ಬಿನತ್ತ ಮಹಾರಾಷ್ಟ್ರ ಕಾರ್ಖಾನೆಗಳ ಕಣ್ಣು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 18:30 IST
Last Updated 4 ಅಕ್ಟೋಬರ್ 2012, 18:30 IST

ಬೀದರ್: ಕಬ್ಬು ಬೆಲೆ ನಿಗದಿ ಪ್ರಶ್ನೆ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ತೂಗುಯ್ಯಾಲೆಯಲ್ಲಿ ಇರುವಂತೆಯೇ, ಇತ್ತ ಪ್ರಸಕ್ತ ಸಾಲಿನಲ್ಲಿ ಕಬ್ಬು ಕೊರತೆಯಾಗುವ ಆತಂಕವನ್ನು ಎದುರಿಸುತ್ತಿರುವ ಮಹಾರಾಷ್ಟದ ಗಡಿಭಾಗದ ಸಕ್ಕರೆ ಕಾರ್ಖಾನೆಗಳು ಜಿಲ್ಲೆಯಲ್ಲಿ ಬೆಳೆದಿರುವ ಕಬ್ಬಿನತ್ತ ಕಣ್ಣು ಹಾಕುತ್ತಿವೆ.

ಸರ್ಕಾರ ಸದ್ಯ ಪ್ರಸಕ್ತ ಹಂಗಾಮಿಗೆ ಟನ್‌ಗೆ 2,200 ರೂಪಾಯಿ ತಾತ್ಕಾಲಿಕ ಬೆಲೆ ನಿಗದಿಪಡಿಸಿದೆ. ಸಕ್ಕರೆ ಕಾರ್ಖಾನೆಗಳ ಉಪ ಉತ್ಪನ್ನಗಳು ಮತ್ತು ಮಾರುಕಟ್ಟೆಯ ಇತರೆ ಅಂಶಗಳನ್ನು ಆಧರಿಸಿ ತದನಂತರ ಅಂತಿಮ ಬೆಲೆ ನಿಗದಿಸುವ ಮಾತನ್ನಾಡಿದೆ. ಆದರೆ, ಈ ತಾತ್ಕಾಲಿಕ ಬೆಲೆ ತಮಗೆ ಒಪ್ಪಿಗೆ ಇಲ್ಲ ಎಂದು ರೈತ ಸಂಘಟನೆಗಳು ತಿರಸ್ಕರಿಸಿವೆ.

ಬೀದರ್ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಲ್ಲಿ ಕಬ್ಬು ಪ್ರಮುಖವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕಬ್ಬು ಬೆಳೆ ಗುರಿ ಮೀರಿ ಬಿತ್ತನೆಯಾಗಿದೆ. ಇನ್ನೊಂದೆಡೆ, ಮಹಾರಾಷ್ಟ್ರದ ಗಡಿ ಭಾಗ ಲಾತೂರ್‌ನಲ್ಲಿರುವ ಕಾರ್ಖಾನೆಗಳು ಪ್ರಸಕ್ತ ವರ್ಷ ಕಬ್ಬು ಕೊರತೆ ಆಗಬಹುದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯತ್ತ ಮುಖಮಾಡಿವೆ.

ಅಲ್ಲಿನ ಕಾರ್ಖಾನೆಗಳ ಪ್ರತಿನಿಧಿಗಳು ಜಿಲ್ಲೆಯಲ್ಲಿನ ರೈತರಿಗೆ ಕಬ್ಬು ಪೂರೈಸಲು ಮನವಿ ಮಾಡುತ್ತಿದ್ದು, ಟನ್‌ಗೆ 2,800 ರಿಂದ 3,000 ರೂಪಾಯಿವರೆಗೂ  ಹಣ ಪಾವತಿಸುವ ಆಮಿಷ ಒಡ್ಡಿದ್ದಾರೆ ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸ್ವಲ್ಪಮಟ್ಟಿನ ಆತಂಕ ಮೂಡಿಸಿದ್ದು, ಕಬ್ಬು ಕೊರತೆಯ ಭೀತಿ ಎದುರಾಗಿದೆ.

ಈ ಬೆಳವಣಿಗೆಗಳ ಕುರಿತು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರನ್ನು ಸಂಪರ್ಕಿಸಿದರೆ,  ~ಈ ಬೆಳವಣಿಗೆಗಳು ನನ್ನ ಗಮನಕ್ಕೆ ಬಂದಿಲ್ಲ. ಪ್ರಸ್ತಾಪ ಬಂದರೆ ಪರಿಶೀಲಿಸುತ್ತೇನೆ. ಆದರೆ, ನಿಯಮದ ಅನುಸಾರ ಕಾರ್ಖಾನೆಗೆ ತನ್ನದೇ ವ್ಯಾಪ್ತಿ ಗುರುತಿಸಲಾಗಿರುತ್ತದೆ. ಆ ವ್ಯಾಪ್ತಿ ಮೀರಿ ಕಬ್ಬು ಪೂರೈಸಲು ಬರುವುದಿಲ್ಲ~ ಎಂದರು.

ಒಟ್ಟಿನಲ್ಲಿ, ಕಾರ್ಖಾನೆಗಳಿಗೆ ಅಸ್ತಿತ್ವ ಉಳಿಸಿಕೊಳ್ಳಲು ಕಬ್ಬು ಬೇಕು. ರೈತರಿಗೆ ತಾವು ಉಳಿಯಲು ಉತ್ತಮ ಬೆಲೆ ಬೇಕು ಎಂಬ ಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.