ADVERTISEMENT

ಬೆಂಗಳೂರಿನಲ್ಲೂ ದಾಳಿ ಬಿಸಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಬೆಂಗಳೂರು: ನಗರದ ಬಸವೇಶ್ವರ ವೃತ್ತದ ಬಳಿಯ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರ ಖಾಸಗಿ ನಿವಾಸ ಮತ್ತು ಶ್ರೀರಾಮುಲು ಅವರ ಸರ್ಕಾರಿ ಬಂಗಲೆ ಮೇಲೆ ಸಿಬಿಐ ಅಧಿಕಾರಿಗಳ ತಂಡ ಸೋಮವಾರ ದಾಳಿ ನಡೆಸಿತು.

ಪಾರಿಜಾತ ಅಪಾರ್ಟ್‌ಮೆಂಟ್‌ನಲ್ಲಿ ರೆಡ್ಡಿ ಅವರಿಗೆ ಸೇರಿದ ಮನೆ ಇದೆ. ಬಳ್ಳಾರಿ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ ಕೆಲ ಹೊತ್ತಿನ ನಂತರ ಡಿವೈಎಸ್ಪಿ ನೇತೃತ್ವದ ಎಂಟು ಮಂದಿ ಅಧಿಕಾರಿಗಳ ತಂಡ ಬೆಳಿಗ್ಗೆ 7.45ರ ಸುಮಾರಿಗೆ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆಸಿತು.

ಮಧ್ಯಾಹ್ನ 12.30ರವರೆಗೂ ತಪಾಸಣೆ ನಡೆಸಿದ ತಂಡ ಓಬಳಾಪುರ ಮೈನಿಂಗ್ ಕಂಪೆನಿಗೆ ಸಂಬಂಧಿಸಿದ ದಾಖಲೆಪತ್ರಗಳ ಪರಿಶೀಲನೆ ನಡೆಸಿತು. ಪ್ರಮುಖ ದಾಖಲೆಗಳನ್ನು ಈ ತಂಡ ಜಪ್ತಿ ಮಾಡಿ ಕೊಂಡೊಯ್ದಿದೆ. ಮನೆಯ ಒಂದು ಕೊಠಡಿಗೆ ಬೀಗ ಹಾಕಲಾಗಿತ್ತು. ಆ ಕೊಠಡಿಯ ಕೀ ಅಧಿಕಾರಿಗಳಿಗೆ ಸಿಗಲಿಲ್ಲ. ಮನೆಯಲ್ಲಿದ್ದ ಕೆಲಸಗಾರರೇ ಆ ನಂತರ ಕೀ ಕೊಟ್ಟರು ಎಂದು ತಿಳಿದುಬಂದಿದೆ.

ರೆಡ್ಡಿ ಅವರ ಮನೆಯಿಂದ ನೇರವಾಗಿ ಶ್ರೀರಾಮುಲು ಅವರ ನಿವಾಸಕ್ಕೆ ಹೊರಟ ತಂಡ ಅಲ್ಲಿಯೂ ತಪಾಸಣೆ ನಡೆಸಿತು. ಕೆಲ ದಾಖಲೆ ಪತ್ರಗಳು ಅಧಿಕಾರಿಗಳಿಗೆ ಸಿಕ್ಕಿವೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.