ADVERTISEMENT

ಬೆಳಗಾವಿಯಲ್ಲಿ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಬೆಂಗಳೂರು: ಬೆಳಗಾವಿಯಲ್ಲಿ ಗುರುವಾರ (ಅ.11) ನಡೆಯಲಿರುವ ಸುವರ್ಣ ಸೌಧದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ ಮಾಹಿತಿ ನೀಡಿದರು.

ನಗರದಲ್ಲಿ ಬುಧವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಸಮಾರಂಭದ ವೇಳೆ ರಾಷ್ಟ್ರಪತಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, `ಅಂತಹ ಯಾವುದೇ ಅಹಿತಕರ ಘಟನೆಗಳಿಗೆ ಪೊಲೀಸರು ಅವಕಾಶ ನೀಡುವುದಿಲ್ಲ.
 
ಗಡಿ ವಿಷಯದಲ್ಲಿ ಮಹಾರಾಷ್ಟ್ರ ಅನಗತ್ಯವಾಗಿ ವಿವಾದ ಸೃಷ್ಟಿಸುತ್ತಿದೆ. ಗಡಿ ವಿವಾದ ಮುಗಿದ ಅಧ್ಯಾಯವಾಗಿದ್ದು, ಈ ವಿಷಯದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ~ ಎಂದರು.

ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ. ಈ ವಿಷಯವಾಗಿ ಮಹಾರಾಷ್ಟ್ರ ಕುಚೋದ್ಯದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಬೆದರಿಕೆಗೆ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದರು.

ಡಿಎಂಕೆ ಹೇಳಿಕೆಗೆ ಖಂಡನೆ
`ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ತಮಿಳುನಾಡು ಸರ್ಕಾರ ಹಾಗೂ ಡಿಎಂಕೆ ಪಕ್ಷದ ಮುಖಂಡರು ಹೇಳಿಕೆ ನೀಡಿರುವುದು ಉದ್ಧಟತನದ ವರ್ತನೆ. ಈ ಹೇಳಿಕೆಯನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ~ ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ ಹರಿಹಾಯ್ದರು.

ಜಯಲಲಿತಾ ಅವರು ಕಾವೇರಿ ನದಿ ನೀರಿಗಾಗಿ ಸದಾ ಕಾಟ ಕೊಡುತ್ತಾರೆ. ಅವರು ಮುಖ್ಯಮಂತ್ರಿ ಆದಾಗಲೆಲ್ಲಾ ಈ ಸಮಸ್ಯೆ ತಲೆದೋರುತ್ತದೆ. ಇದೀಗ ಪುದುಚೇರಿ ಮುಖ್ಯಮಂತ್ರಿ ರಂಗಸ್ವಾಮಿ ಅವರು ಕಾವೇರಿ ನದಿ ನೀರಿಗಾಗಿ ಬೇಡಿಕೆ ಮುಂದಿಟ್ಟಿದ್ದಾರೆ. ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ಕಾವೇರಿ ನದಿ ನೀರಿನ ವಿಷಯವಾಗಿ ಬ್ಲಾಕ್‌ಮೇಲ್ ಮಾಡುತ್ತಿವೆ. ಇಂತಹ ಬೆದರಿಕೆ ತಂತ್ರವನ್ನು ಹೇಗೆ ಹೆದರಿಸಬೇಕೆಂದು ರಾಜ್ಯದ ಜನತೆಗೆ ಗೊತ್ತಿದೆ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.