
ಬೆಂಗಳೂರು: ಮೂರು ಬೈಕ್‌ಗಳನ್ನೇರಿದ 32 ಮಂದಿ ಯೋಧರ ಪಿರಮಿಡ್ ಶರವೇಗದಲ್ಲಿ ಸಾಗಿ ಬಂದ ಅಪೂರ್ವ ದೃಶ್ಯವನ್ನು ಪ್ರೇಕ್ಷಕರು ಕಣ್ಣೆವೆಯಿಕ್ಕದೆ ವೀಕ್ಷಿಸಿದರು. ಒಂದು ಕಿಲೋ ಮೀಟರ್ ದೂರವನ್ನು ತಂಡವು ಕೇವಲ 56.23 ಸೆಕೆಂಡ್‌ಗಳಲ್ಲಿ ಕ್ರಮಿಸುತ್ತಿದ್ದಂತೆಯೇ ಕರತಾಡನದ ಸುರಿಮಳೆ.
ಎರಡು ಬೈಕ್‌ಗಳನ್ನು ಏರಿದ್ದ 12 ಮಂದಿಯ ಪಿರಮಿಡ್ 1 ಕಿ.ಮೀ. ದೂರವನ್ನು ಕ್ರಮಿಸಲು ತೆಗದುಕೊಂಡಿದ್ದು ಕೇವಲ 48.72 ಸೆಕೆಂಡ್! ಈ ಸಾಹಸ ದೃಶ್ಯಗಳಿಗೆ ತುಂತುರು ಮಳೆ ಹಿಮ್ಮೇಳ ಒದಗಿಸಿತು.
ಆರ್ಮಿ ಸರ್ವೀಸ್ ಕೋರ್ (ಎಎಸ್‌ಸಿ) ಸೆಂಟರ್ ಅಂಡ್ ಕಾಲೇಜ್‌ನ ಸೈನಿಕರ ‘ಟಾರ್ನೆಡೋಸ್’ ತಂಡ, ‘ಕಾರ್ಪ್ಸ್ ಆಫ್ ಸಿಗ್ನಲ್ಸ್’ ತಂಡದ ಹೆಸರಿನಲ್ಲಿದ್ದ ಎರಡು ಹಳೆಯ ದಾಖಲೆಗಳನ್ನು ಭಾನುವಾರ ಅಳಿಸಿ ಹಾಕಿತು. ಅತ್ಯಂತ ವೇಗದಲ್ಲಿ ಸಾಗಿದ ಪಿರಮಿಡ್ ಎಂಬ ಹೆಗ್ಗಳಿಕೆ ಟಾರ್ನೆಡೋಸ್ ತಂಡಕ್ಕೆ ಪ್ರಾಪ್ತವಾಯಿತು.
ನಗರದ ಹೊರವಲಯದ ಸೋಮಪುರದ ನೈಸ್ ರಸ್ತೆ ಈ ಸಾಹಸಕ್ಕೆ ವೇದಿಕೆಯಾಯಿತು. ಮೂರು ಬೈಕ್‌ಗಳಲ್ಲಿ 30 ಮಂದಿಯ ಪಿರಮಿಡ್ 1 ಕಿಲೋಮೀಟರ್ ದೂರವನ್ನು 1 ನಿಮಿಷದಲ್ಲಿ ಕ್ರಮಿಸಿದ್ದು ಹಾಗೂ ಎರಡು ಬೈಕ್‌ಗಳಲ್ಲಿ 10 ಮಂದಿಯ ಪಿರಮಿಡ್ 1 ಕಿ.ಮೀ. ದೂರವನ್ನು 54 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು ಈ ಹಿಂದಿನ ದಾಖಲೆ ಆಗಿತ್ತು.
32 ಮಂದಿಯ ಪಿರಮಿಡ್ ಹೊತ್ತ ಮೂರು ಬೈಕ್‌ಗಳನ್ನು ಎಂ.ಶಶಿರಾಜ, ಆರ್.ತಿರುಮಾಳವನ್ ರಾಮಪಾಲ್ ಯಾದವ್ ಹಾಗೂ 12 ಮಂದಿಯ ಪಿರಮಿಡ್ ಹೊತ್ತ ಎರಡು ಬೈಕ್‌ಗಳನ್ನು ರಾಮಪಾಲ್ ಯಾದವ್ ಮತ್ತು ಆರ್.ತಿರುಮಾಳವನ್ ಚಲಾಯಿಸಿದರು.
ದಾಖಲೆ ನಿರ್ಮಿಸಿದ ಕನ್ನಡಿಗ ಶಶಿರಾಜ: ವೈಯಕ್ತಿಕ ವಿಭಾಗದಲ್ಲಿ ನಾಲ್ವರು ಯೋಧರು ಹೊಸ ದಾಖಲೆ ನಿರ್ಮಿಸಿದರು. ಬೈಕಿನ ಮೇಲೆ ನಿಂತುಕೊಂಡೇ ಸತತ 19.1 ಕಿಲೋ ಮೀಟರ್ ದೂರವನ್ನು ಕನ್ನಡಿಗ ಯೋಧ ಶಶಿರಾಜ 18 ನಿಮಿಷ 40 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಅವರು ಸಿಗ್ನಲ್ ಕೋರ್ ತಂಡದ ಕ್ಯಾಪ್ಟನ್ ಅಭಿಜಿತ್ ಮೆಲಾವತ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಅಭಿಜಿತ್ 16 ಕಿ.ಮೀ. ದೂರವನ್ನು 39 ನಿಮಿಷ 05 ನಿಮಿಷಗಳಲ್ಲಿ ಕ್ರಮಿಸಿದ್ದರು.
‘ನಾನು ಒಂದು ತಿಂಗಳಿನಿಂದ ಅಭ್ಯಾಸ ಮಾಡಿದ್ದೆ. ಅಭ್ಯಾಸದ ಸಂದರ್ಭದಲ್ಲಿ 19 ಕಿ.ಮೀ. ದೂರವನ್ನು 21 ನಿಮಿಷದಲ್ಲಿ ಕ್ರಮಿಸಿದ್ದೆ. ಹಾಗಾಗಿ ಅಭಿಜಿತ್ ಹೆಸರಿನಲ್ಲಿದ್ದ ದಾಖಲೆ ಮುರಿಯುವ ವಿಶ್ವಾಸ ಇತ್ತು’ ಎಂದು ಶಶಿರಾಜ ‘ಪ್ರಜಾವಾಣಿ’ಗೆ ತಿಳಿಸಿದರು.
2000ನೇ ಇಸವಿಯಲ್ಲಿ 11 ಬೈಕ್‌ಗಳಲ್ಲಿ 181 ಮಂದಿ ಯೋಧರು ಸಾಗುವ ಮೂಲಕ ದಾಖಲೆ ನಿರ್ಮಿಸಿದ ತಂಡದಲ್ಲೂ ಶಶಿರಾಜ ಸದಸ್ಯರಾಗಿದ್ದರು. ಅಂದು ಅವರೂ ಬೈಕ್ ಚಲಾಯಿಸಿದ್ದರು.
ಪಿ.ರೂಪನಾರ್ ದಿಲೀಪ್ ಬೈಕಿನ ಮುಂದಿನ ಚಕ್ರದ ಮಡ್‌ಗಾರ್ಡ್ ಮೇಲೆ ಹಿಮ್ಮುಖವಾಗಿ ಕುಳಿತು 19.1 ಕಿ.ಮೀ ದೂರವನ್ನು 39 ನಿಮಿಷ 47 ಸೆಕೆಂಡ್‌ಗಳಲ್ಲಿ ಕ್ರಮಿಸಿ ಹೊಸ ದಾಖಲೆ ನಿರ್ಮಿಸಿದರು. ಮಡ್‌ಗಾರ್ಡ್ ಮೇಲೆ ಕುಳಿತಾಗ ಅವರಿಗೆ ಸಾಗಬೇಕಾದ ಮಾರ್ಗ ಕಾಣುತ್ತಿರಲಿಲ್ಲ. ಹಿಂದೆ ನೋಡಿಕೊಂಡು ಅವರು ಬೈಕ್ ಚಲಾಯಿಸಬೇಕಿತ್ತು.
ಶೆವಾಲೆ ರವೀಂದ್ರ ಅವರು ಮಲಗಿಕೊಂಡು ಬೈಕ್ ಚಲಾಯಿಸಿ 19.1 ಕಿ.ಮೀ ದೂರವನ್ನು 24 ನಿಮಿಷ 16 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.
ಕ್ಯಾಪ್ಟನ್ ಬನ್ನಿ ಶರ್ಮ ಅವರು ಬೈಕಿನ ಸೀಟಿನ ಮೇಲೆ ಮಂಡಿಯೂರಿ ಕುಳಿತು, ಹ್ಯಾಂಡಲ್ ಹಿಡಿಯದೆಯೇ 19.1 ಕಿ.ಮೀ ದೂರವನ್ನು 28 ನಿಮಿಷ 22 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.
ಹ್ಯಾಂಡಲ್ ಹಿಡಿಯದೆಯೇ ಬೈಕ್ ಚಲಾಯಿಸುವ ಯೋಧರು ಒಂದು ಕಡೆ ಇಂಗ್ಲಿಷ್ ಅಕ್ಷರ ಯೂ ಆಕಾರದ ತಿರುವನ್ನು ಕ್ರಮಿಸಬೇಕಿತ್ತು. ಒಂದು ಕಡೆ ರಸ್ತೆ ಉಬ್ಬನ್ನು ಹಾಯಿಸಿಕೊಂಡು ಬರಬೇಕಿತ್ತು. ವೇಗವನ್ನು ನಿಯಂತ್ರಿಸುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ವೈಯಕ್ತಿಕ ದಾಖಲೆ ವಿಭಾಗದ ಪ್ರದರ್ಶನ ನಡೆಯುವಾಗ ಆರಂಭದಲ್ಲಿ 20 ನಿಮಿಷ ಮಾತ್ರ ನೈಸ್ ರಸ್ತೆಯಲ್ಲಿ ಇತರ ವಾಹನಗಳ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಬಳಿಕ ಯೋಧರು ಇತರ ವಾಹನಗಳ ನಡುವೆಯೇ ಬೈಕ್ ಚಲಾಯಿಸಿಕೊಂಡು ಹೋದರು.
‘ಇಂದು ನಿರ್ಮಿಸಲಾದ ಹೊಸ ದಾಖಲೆಗಳ ವಿಡಿಯೊ ಮತ್ತಿತರ ಮಾಹಿತಿಗಳನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹಾಗೂ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಗಳಿಗೆ ಕಳುಹಿಸಿಕೊಡುತ್ತೇವೆ. ಇದನ್ನು ಪರಿಶೀಲಿಸಿದ ಬಳಿಕ ಅವರು ಈ ದಾಖಲೆಗಳನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ’ ಎಂದು ಕ್ಯಾ.ಬನ್ನಿ ಶರ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
ಎಎಸ್‌ಸಿ ಸೆಂಟರ್ ಅಂಡ್ ಕಾಲೇಜಿನ ಲೆಫ್ಟಿನಂಟ್ ಜನರಲ್ ಎಸ್.ಪಿ.ಎಸ್ ಕಟೇವ, ಎಎಸ್‌ಸಿ ಸೆಂಟರ್‌ನ ಬ್ರಿಗೇಡಿಯರ್ ರಾಜೀವ್ ಮಿನೋಚ, ಐಎಫ್‌ಎಸ್ ಅಧಿಕಾರಿ ಬಿ.ಕೆ.ದೀಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು. ಎಎಸ್‌ಸಿಯ ಟಾರ್ನೆಡೋಸ್ ತಂಡ ಸ್ಥಾಪನೆ ಆಗಿದ್ದು 1982ರಲ್ಲಿ. ಆ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ತಂಡವು ಮೈನವಿರೇಳಿಸುವ ಬೈಕ್ ಸಾಹಸ ಪ್ರದರ್ಶಿಸಿತ್ತು. ತಂಡದ ಸದಸ್ಯರು ಇದುವರೆಗೆ ಏಳು ವಿಶ್ವದಾಖಲೆ ಹಾಗೂ ಆರು ರಾಷ್ಟ್ರೀಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಹಾಗೂ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲೂ ಸ್ಥಾನ ಪಡೆದಿವೆ. ಡಿಸೆಂಬರ್ 8ರಂದು ಎಎಸ್‌ಸಿ ಸೆಂಟರ್‌ನಲ್ಲಿ ತಂಡವು ಸಾಹಸ ಪ್ರದರ್ಶನ ನೀಡಲಿದೆ.
ಗಾಯಗೊಂಡ ನಾಯಕ
ಕರ್ನಲ್ ಕೆ.ಕೆ.ನಾಯರ್ ಅವರು ಟಾರ್ನೆಡೋಸ್ ತಂಡದ ನಾಯಕತ್ವ ವಹಿಸಿದ್ದರು. ತರಬೇತಿಯಲ್ಲೂ ಅವರೇ ಪ್ರಮುಖ ಪಾತ್ರ ವಹಿಸಿದ್ದರು. ದಾಖಲೆ ನಿರ್ಮಾಣಕ್ಕಾಗಿ ಅವರು ಕೂಡ ಬೈಕ್ ಚಲಾಯಿಸಬೇಕಿತ್ತು. ಕೊನೆಯ ಕ್ಷಣದ ಸಿದ್ಧತೆ ನಡೆಸುವಾಗ ಅವರು ಬೈಕಿನಿಂದ ಬಿದ್ದು ಗಾಯಗೊಂಡರು. ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಚಿಕಿತ್ಸೆಗೆ ಕರೆದೊಯ್ಯಲಾಯಿತು.
*
ಸೈನಿಕರು ನಿರ್ಮಿಸಿದ ದಾಖಲೆಗಳು ಇತರರಿಗೂ ಸ್ಫೂರ್ತಿ. ಇದನ್ನು ಕಂಡು ಇನ್ನಷ್ಟು ಮಂದಿ ಈ ಸಾಹಸ ಕ್ರೀಡೆಯತ್ತ ಮುಖ ಮಾಡಲಿದ್ದಾರೆ. ದಾಖಲೆ ನಿರ್ಮಿಸಿದ ಸೈನಿಕರಿಗೆ ಅಭಿನಂದನೆ
- ಬ್ರಿಗೇಡಿಯರ್ ರಾಜೀವ್ ಮಿನೋಚ,
ಕಮಾಂಡರ್ ಎಎಸ್‌ಸಿ ಸೆಂಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.