ADVERTISEMENT

ಬೇಲೂರು, ಹಳೆಬೀಡು, ಸೋಮನಾಥಪುರ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆ ಸಂಭವ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2011, 19:30 IST
Last Updated 5 ನವೆಂಬರ್ 2011, 19:30 IST
ಬೇಲೂರು, ಹಳೆಬೀಡು, ಸೋಮನಾಥಪುರ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆ ಸಂಭವ
ಬೇಲೂರು, ಹಳೆಬೀಡು, ಸೋಮನಾಥಪುರ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆ ಸಂಭವ   

ಬೆಂಗಳೂರು: ಐತಿಹಾಸಿಕ ಪ್ರೇಕ್ಷಣಿಯ ಸ್ಥಳಗಳಾದ ಬೇಲೂರು, ಹಳೆಬೀಡು ಮತ್ತು ಸೋಮನಾಥಪುರವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ.

ಕೆಲ ವರ್ಷಗಳಿಂದ ಯುನೆಸ್ಕೊದೊಂದಿಗೆ ಸಂಪರ್ಕವಿಟ್ಟುಕೊಂಡು ಕೆಲಸ ಮಾಡುತ್ತಿರುವ ಮತ್ತು ಬೇಲೂರು, ಹಳೆಬೀಡು ಹಾಗೂ ಸೋಮನಾಥಪುರದ ಬಗ್ಗೆ ಅಧ್ಯಯನ ಮಾಡಿರುವ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರೊ.ಜ್ಯೋತಿ ಹೊಸ ಅಗ್ರಹಾರ ಅವರು ಸಲ್ಲಿಸಿರುವ ವರದಿ ಆಧರಿಸಿ ವಿಶ್ವಪರಂಪರೆ ಪಟ್ಟಿಗೆ ಸೇರಿಸಲು ಸಿದ್ಧತೆಗಳು ನಡೆದಿವೆ.

ಕನ್ನಡದವರೇ ಆದ ಜ್ಯೋತಿ ಅವರು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆ.ಜೈರಾಜ್ ಅವರಿಗೆ ಕೆಲ ತಿಂಗಳ ಹಿಂದೆ ಈ ಸಂಬಂಧ ಪ್ರಸ್ತಾವ ಸಲ್ಲಿಸಿದ್ದರು. ಇದಾದ ನಂತರ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸುವ ಬಗ್ಗೆ ಸ್ಥಳೀಯ ಯೋಜನಾ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಚರ್ಚೆಯೂ ಆಗಿದೆ. ವಿಶ್ವಪರಂಪರೆ ಪಟ್ಟಿಗೆ ಸೇರಿಸುವ ಸಂಬಂಧ ಜೈರಾಜ್ ಅವರು ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ದೊರೆತ ನಂತರ ಮುಂದಿನ ಕಾರ್ಯಚಟುವಟಿಕೆಗಳ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವಹಿಸಲಾಗುತ್ತದೆ ಎಂದು ಜೈರಾಜ್ `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಕ್ರಿಯೆ ಹೇಗೆ?: ಐತಿಹಾಸಿಕ ಸ್ಥಳಗಳನ್ನು ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆ ಮಾಡುವುದು ಅಷ್ಟು ಸುಲಭವಲ್ಲ. ಯುನೆಸ್ಕೊ ತನ್ನದೇ ಆದ ಮಾರ್ಗಸೂಚಿಗಳನ್ನು ಹಾಕಿಕೊಂಡಿದ್ದು, ಆ ಪ್ರಕಾರ ಪ್ರತಿ ವರ್ಷ ಒಂದು ರಾಷ್ಟ್ರದಿಂದ ಎರಡು ಸ್ಥಳಗಳನ್ನು ಮಾತ್ರ ಸೇರ್ಪಡೆ ಮಾಡಲು ಅವಕಾಶವಿದೆ.

ಯುನೆಸ್ಕೊದ ನಿಗದಿತ ಅರ್ಜಿ ನಮೂನೆಯಲ್ಲಿ ರಾಜ್ಯ ಸರ್ಕಾರ ವಿವರವಾದ ವರದಿಯನ್ನು ಯುನೆಸ್ಕೊಗೆ ಸಲ್ಲಿಸಬೇಕಾಗುತ್ತದೆ. ಅಲ್ಲದೆ ಇದನ್ನು ಕೇಂದ್ರ ಸರ್ಕಾರದ ಪ್ರಾಚ್ಯವಸ್ತು ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೂ ಸಲ್ಲಿಸುವುದು ಕಡ್ಡಾಯ. ಕೇಂದ್ರ ಸರ್ಕಾರವು ರಾಜ್ಯದ ಪ್ರಸ್ತಾವವನ್ನು ಪರಿಶೀಲಿಸಿ ಯುನೆಸ್ಕೊಗೆ ಶಿಫಾರಸು ಮಾಡಬೇಕಾಗುತ್ತದೆ. ಇದಾದ ನಂತರ ಯುನೆಸ್ಕೊ ಸಮಿತಿ ಸಭೆ ಸೇರಿ ವಿಶ್ವಪರಂಪರೆ ಪಟ್ಟಿಗೆ ಪರಿಗಣಿಸಬೇಕೇ, ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಕಲೆ, ನೃತ್ಯ, ವಾಸ್ತುಶಿಲ್ಪ, ಶಿಲ್ಪಕಲೆಗೆ ಹೆಸರಾಗಿರುವ ಬೇಲೂರು, ಹಳೆಬೀಡು ಮತ್ತು ಸೋಮನಾಥಪುರವನ್ನು 300ಕ್ಕೂ ಹೆಚ್ಚು ವರ್ಷಗಳ ಕಾಲ ಹೊಯ್ಸಳರ ರಾಜಮನೆತನ ಆಳಿದ್ದು, ಅವರ ಕಾಲದಲ್ಲೇ ಇಲ್ಲಿನ ಚನ್ನಕೇಶವ, ಹೊಯ್ಸಳೇಶ್ವರ ದೇವಸ್ಥಾನಗಳು ನಿರ್ಮಾಣವಾಗಿವೆ.  

12 ಮತ್ತು 13ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯಗಳು ಹೊಯ್ಸಳ ಶೈಲಿಯ ಶಿಲ್ಪಕಲೆಗೆ ಪ್ರಸಿದ್ಧಿಯಾಗಿವೆ. ಬೇಲೂರು, ಹಳೆಬೀಡು ಅಷ್ಟೇ ಅಲ್ಲದೆ ಸುತ್ತಮುತ್ತಲಿನ 14 ಹಳ್ಳಿಗಳಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಿರುವ ಕೋಟೆಗಳು, ಸಣ್ಣ ದೇವಾಲಯ ಮತ್ತು ಮಂಟಪಗಳು, ಅವರ ಕಾಲದ ಸಂಗೀತ, ನೃತ್ಯ, ಇತಿಹಾಸವನ್ನು ತಿಳಿಸುವ ಕಟ್ಟಡಗಳು, ಶಾಸನ ಕಲ್ಲುಗಳು, ಶಿಲಾಬಂಡೆಗಳು, ಪರಂಪರೆಯನ್ನು ಬಿಂಬಿಸುವ ಮನೆಗಳು ಇರುವುದನ್ನು 2006ರಲ್ಲೇ ಯುನೆಸ್ಕೊ ಮತ್ತು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ.

ಈ ಮೂರು ಸ್ಥಳಗಳು ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾದರೆ, ಇವುಗಳ ಸುತ್ತಮುತ್ತ ವಾಸಿಸುತ್ತಿರುವ ಜನರನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗುತ್ತದೆ. ಪ್ರವಾಸಿ ತಾಣವಾಗಿ ಮಾರ್ಪಟ್ಟರೆ ಲಕ್ಷಾಂತರ ಪ್ರವಾಸಿಗಳು ಭೇಟಿ ನೀಡುವುದಲ್ಲದೆ ಅನುದಾನವೂ ಹರಿದು ಬರಲಿದೆ. ಅಂತರರಾಷ್ಟ್ರೀಯ ಮಟ್ಟದ ಇತಿಹಾಸಕಾರರು, ತಜ್ಞರು ಭೇಟಿ ನೀಡಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯ ರಸ್ತೆ, ಮಂದಿರಗಳ ಚಾವಡಿಗಳು ಅಭಿವೃದ್ಧಿಯಾಗಲಿವೆ. ಮೂಲಸೌಕರ್ಯಗಳ ಅಭಿವೃದ್ಧಿಯಿಂದಾಗಿ ಉದ್ಯೋಗಾವಕಾಶಗಳು ದೊರೆಯಲಿವೆ. ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ. ಹೊಯ್ಸಳರ ಕಾಲದ ಕಲೆ, ಸಂಸ್ಕೃತಿ, ಶಿಲ್ಪಕಲೆಯ ಸಂರಕ್ಷಣೆಗೂ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ರೂ 30 ಕೋಟಿ ನೆರವು: ಕೇಂದ್ರ ಪ್ರವಾಸೋದ್ಯಮ ಇಲಾಖೆ ಬೇಲೂರು, ಹಳೆಬೀಡು ಅಭಿವೃದ್ಧಿಗೆ 30 ಕೋಟಿ ರೂಪಾಯಿ ನೆರವು ನೀಡಲು ಮುಂದೆ ಬಂದಿದೆ. ಈ ಮಧ್ಯೆ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಯಾದರೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬ ಆಶಯವನ್ನು ಸರ್ಕಾರ ಹೊಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.