ADVERTISEMENT

ಬೋಗಿಗೆ ಬೆಂಕಿ; ಇಬ್ಬರು ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST
ಬೋಗಿಗೆ ಬೆಂಕಿ; ಇಬ್ಬರು ಸಜೀವ ದಹನ
ಬೋಗಿಗೆ ಬೆಂಕಿ; ಇಬ್ಬರು ಸಜೀವ ದಹನ   

ಗುಲ್ಬರ್ಗ: ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಬೋಗಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು, ಮಹಿಳೆ ಹಾಗೂ ಮಗು ಸ್ಥಳದಲ್ಲೇ ಸಜೀವ ದಹನಗೊಂಡ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ಇಲ್ಲಿ  ಸಂಭವಿಸಿದೆ.

ಹೈದರಾಬಾದಿನಿಂದ ಸೊಲ್ಲಾಪುರಕ್ಕೆ ಹೊರಟಿದ್ದ ಪ್ಯಾಸೆಂಜರ್ ರೈಲು, ಇಲ್ಲಿನ ರೈಲು ನಿಲ್ದಾಣದ ಮೂರನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದಾಗ ಈ ದುರ್ಘಟನೆ ನಡೆದಿದೆ. ದಿಢೀರನೇ ಹತ್ತಿದ ಬೆಂಕಿ ಕೆಲವೇ ನಿಮಿಷಗಳಲ್ಲಿ ಇಡೀ ಬೋಗಿ ಆವರಿಸಿದ ಪರಿಣಾಮ, ಒಳಗಿದ್ದ ಪ್ರಯಾಣಿಕರು ಹೊರಬರಲು ಧಾವಿಸಿದರು. ಈ ನೂಕುನುಗ್ಗಲಿನಲ್ಲಿ ಹೊರಗೆ ಬರಲು ಸಾಧ್ಯವಾಗದೇ ಮಹಿಳೆ ಹಾಗೂ ಮಗು ಬೋಗಿಯಲ್ಲೇ ಮೃತಪಟ್ಟಿದ್ದಾರೆ. ಏಳು ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿವರ: ಹೈದರಾಬಾದಿನ ಫಲಕನುಮಾ ನಿಲ್ದಾಣದಿಂದ ಬೆಳಿಗ್ಗೆ ಹೊರಡುವ ಪ್ಯಾಸೆಂಜರ್ ರೈಲು ಗುಲ್ಬರ್ಗಕ್ಕೆ ಮಧ್ಯಾಹ್ನ 12.50ಕ್ಕೆ ಆಗಮಿಸುತ್ತದೆ. ಇಲ್ಲಿಂದ ಸೊಲ್ಲಾಪುರಕ್ಕೆ ಮಧ್ಯಾಹ್ನ 4.10ಕ್ಕೆ ಹೊರಡುತ್ತದೆ. ಮಂಗಳವಾರ ಈ ರೈಲು ಹತ್ತು ನಿಮಿಷ ತಡವಾಗಿ ಆಗಮಿಸಿತ್ತು. ಮಧ್ಯಾಹ್ನ 1.45ರ ಸುಮಾರಿಗೆ ಬೋಗಿಯೊಂದರ ಶೌಚಾಲಯದಿಂದ ಹೊಗೆ ಕಾಣಿಸಿಕೊಂಡಿತು. ಜನರ ಗಮನ ಅತ್ತ ಕಡೆ ಹೋಗುವ ಹೊತ್ತಿಗೆ ಬೆಂಕಿ ಇಡೀ ಬೋಗಿ ಆವರಿಸಿತು. ಒಳಗೆ ಜ್ವಾಲೆಗಳು ಧಗಧಗಿಸುತ್ತಿದ್ದಂತೆ ಪಕ್ಕದ ಎರಡನೇ ಪ್ಲಾಟ್‌ಫಾರ್ಮ್ ಮೇಲೆ ನಿಂತಿದ್ದ ಜನರು ದಿಗ್ಭ್ರಮೆಯಿಂದ ಚೆಲ್ಲಾಪಿಲ್ಲಿಯಾಗಿ ಓಡಿದರು. ಕೆಲವರು ಬಕೆಟ್, ಕೊಡಗಳಿಂದ ನೀರು ತಂದು ಬೆಂಕಿ ನಂದಿಸಲು ಯತ್ನಿಸಿದರೂ ಬೆಂಕಿಯ ಜ್ವಾಲೆಗಳು ಅವರನ್ನು ಹತ್ತಿರ ಬರಲು ಬಿಡಲಿಲ್ಲ.

ಅರ್ಧ ಗಂಟೆ ಬಳಿಕ ಅಗ್ನಿಶಾಮಕ ಪಡೆ ಆಗಮಿಸಿ, ಬೆಂಕಿ ನಂದಿಸಲು ಯತ್ನ ನಡೆಸಿತು. ಸತತ ಪ್ರಯತ್ನದ ಬಳಿಕ ಬೆಂಕಿ ನಂದಿಸಲಾಯಿತು. ಜ್ವಾಲೆಗೆ ಸಿಲುಕಿ ಬೋಗಿ ಸಂಪೂರ್ಣ ಸುಟ್ಟುಹೋಗಿದೆ. ಒಳಗೆ ಹೋದ ಸುರಕ್ಷತಾ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಸುಟ್ಟು ಕರಕಲಾಗಿದ್ದ ಮಹಿಳೆ ಹಾಗೂ ಮಗುವಿನ ದೇಹಗಳು ಪತ್ತೆಯಾದವು. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ.

ಕಾರಣ ಏನು?:ಬೋಗಿಗೆ ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಈ ಪ್ಯಾಸೆಂಜರ್ ರೈಲಿನಲ್ಲಿ ಗಣಿಗಾರಿಕೆಯಲ್ಲಿ ಕಲ್ಲು ಸ್ಫೋಟಿಸಲು ಬಳಸುವ ಜಿಲೆಟಿನ್ ಕಡ್ಡಿಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತದೆ ಎನ್ನಲಾಗಿದೆ. ಹೀಗೆ ಸಾಗಿಸುವವರು ಜಿಲೆಟಿನ್ ಕಡ್ಡಿಗಳನ್ನು ಕಟ್ಟಿ, ಶೌಚಾಲಯದಲ್ಲಿ ಇಟ್ಟು ಸುಮ್ಮನೇ ಕುಳಿತುಕೊಳ್ಳುತ್ತಾರೆ. ಅಧಿಕಾರಿಗಳು ತಪಾಸಣೆಗೆ ಬಂದರೆ, ಅವುಗಳನ್ನು ಅಲ್ಲಿಯೇ ಬಿಟ್ಟು ಇಳಿದುಬಿಡುತ್ತಾರೆ.

ಒಂದು ವೇಳೆ ಯಾರೂ ತಪಾಸಣೆ ನಡೆಸದೇ ಹೋದರೆ, ತಮ್ಮೂರು ಬರುತ್ತಲೇ ಜಿಲೆಟಿನ್‌ಗಳನ್ನು ತೆಗೆದುಕೊಂಡು ಇಳಿದುಬಿಡುತ್ತಾರೆ. ಇಂದಿನ ಘಟನೆಗೆ ಇದೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
`ಬೋಗಿಗೆ ಬೆಂಕಿ ಹತ್ತಿಕೊಳ್ಳುವ ಮುನ್ನ ಶೌಚಾಲಯದ ಕಡೆಯಿಂದ ಸ್ಫೋಟದ ಶಬ್ದ ಕೇಳಿಬಂತು. ಮುಂದೆ ಕೆಲವೇ ನಿಮಿಷದಲ್ಲಿ ಬೆಂಕಿ ಬೋಗಿಯನ್ನು ಆವರಿಸಿತು` ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಸೊಲ್ಲಾಪುರ ವಿಭಾಗದ ಹಿರಿಯ ಅಧಿಕಾರಿಗಳು ರಾತ್ರಿ ಗುಲ್ಬರ್ಗಕ್ಕೆ ಆಗಮಿಸಲಿದ್ದಾರೆ. ತನಿಖೆ ನಡೆಸಲು ತಂಡವೊಂದು ಬರಲಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.