ADVERTISEMENT

ಬ್ಯಾನರ್ ವಿವಾದ: ಗುಂಪು ಘರ್ಷಣೆ: 7 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:59 IST
Last Updated 8 ಸೆಪ್ಟೆಂಬರ್ 2013, 19:59 IST
ಬೆಳಗಾವಿಯ ಅನಗೋಳದ ರಾಜಹಂಸ ಗಲ್ಲಿಯಲ್ಲಿ ಭಾನುವಾರ ಗುಂಪು ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ
ಬೆಳಗಾವಿಯ ಅನಗೋಳದ ರಾಜಹಂಸ ಗಲ್ಲಿಯಲ್ಲಿ ಭಾನುವಾರ ಗುಂಪು ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ   

ಬೆಳಗಾವಿ: ಗಣೇಶ ಉತ್ಸವದ ಬ್ಯಾನರ್ ಕಟ್ಟುವ ಕುರಿತು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, 7 ಮಂದಿ ಗಾಯಗೊಂಡ ಘಟನೆ ಇಲ್ಲಿನ ಅನಗೋಳದ ರಾಜಹಂಸ ಗಲ್ಲಿಯಲ್ಲಿ ಭಾನುವಾರ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಎರಡೂ ಗುಂಪಿನ 15 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಾರ್ಥನಾ ಮಂದಿರದ ಬಳಿ ಗಣೇಶ ಉತ್ಸವದ ಬ್ಯಾನರ್ ಕಟ್ಟಲು ಒಂದು ಗುಂಪು ಮುಂದಾದಾಗ, ಮತ್ತೊಂದು ಗುಂಪು ಇದಕ್ಕೆ ವಿರೋಧ ವ್ಯಕ್ತಪಡಿಸಿತು. ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಎರಡೂ ಗುಂಪಿನವರು ಹೊಡೆದಾಡಿದ್ದಾರೆ. 7 ಜನರಿಗೆ ತಲೆ, ಕೈಗಳಿಗೆ ಗಾಯಗಳಾಗಿದ್ದು, ಇದರಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರ ಪೈಕಿ ಆರು ಜನರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಹಾಗೂ ಒಬ್ಬರನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬ್ಯಾನರ್ ಕಟ್ಟುವ ವಿಚಾರಕ್ಕೆ ಮಾತಿನ ಚಕಮಕಿ ನಡೆಯುತ್ತಿದ್ದಂತೆ ರಾಜಹಂಸ ಗಲ್ಲಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕ್ಷಣಾರ್ಧದಲ್ಲಿಯೇ 2 ಗುಂಪಿನವರು ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಡಿದಾಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಸದ್ಯ ಈ ಪ್ರದೇಶದಲ್ಲಿ ಬಂದೋಬಸ್ತ್ ಮಾಡಲಾಗಿದೆ.

`ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ಸೇರಿದಂತೆ ಮೂರು ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಗಣೇಶ ಹಬ್ಬದ ಆಚರಣೆಗೆ ಯಾವುದೇ ಧಕ್ಕೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ `ಪ್ರಜಾವಾಣಿ'ಗೆ ತಿಳಿಸಿದರು.

`ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಣೇಶ ಹಬ್ಬ ಆಚರಣೆಗೆ ಯಾವುದೇ ತೊಂದರೆ ಇಲ್ಲ. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು' ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಪೊಲೀಸ್ ಮಹಾನಿರೀಕ್ಷಕ (ಉತ್ತರ ವಲಯ) ಕೆ.ಎಸ್.ಆರ್. ಚರಣರೆಡ್ಡಿ ತಿಳಿಸಿದರು.
ಠಾಣೆಗೆ ಮುತ್ತಿಗೆ: ತಮ್ಮ ಕಡೆಯವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ 2ಗುಂಪಿನ ಮಹಿಳೆಯರು ಟಿಳಕವಾಡಿ ಠಾಣೆಗೆ ಮುತ್ತಿಗೆ ಹಾಕಿದರು. ಪೊಲೀಸ್ ಅಧಿಕಾರಿಗಳೊಂದಿಗೆ ಮಹಿಳೆಯರು ವಾಗ್ವಾದಕ್ಕಿಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.